ಜಗಳೂರು,ಜ.6- ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ 5 ನೇ ದಿನದಂದು `ಕನ್ನಡ ರಥ’ ಸಂಚಾರಕ್ಕೆ ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು, ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ಮುಖಾಂತರ ಬೀಳ್ಕೊಡಲಾಯಿತು.
ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ, ಇದೇ ದಿನಾಂಕ 11 ಮತ್ತು 12 ರಂದು ಜಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಾಗೂ ಕೆರೆಕೋಡಿ ಬಿದ್ದಿರುವ ಜಲ ಸಂಭ್ರಮ ಕ್ಕಾಗಿ ಶಾಸಕ ಬಿ.ದೇವೇಂದ್ರಪ್ಪ ಅವರ ಸಂಕಲ್ಪದಂತೆ ಇದೇ ದಿನಾಂಕ 13 ರಂದು ಆಯೋಜಿಸಲಾಗಿರುವ `ಜಲೋತ್ಸವ’ ಕಾರ್ಯಕ್ರಮಕ್ಕೆ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು 10 ದಿನಗಳ ಕಾಲ ಜನಜಾಗೃತಿಗಾಗಿ, ತಾಲ್ಲೂಕಿನಾದ್ಯಂತ 22 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳು ಮತ್ತು ಪ್ರಮುಖ ಹಳ್ಳಿಗಳಲ್ಲಿ ಕನ್ನಡ ರಥ ಸಂಚರಿಸುವ ಮೂಲಕ ಕನ್ನಡದ ಕಂಪು ಸೂಸುತ್ತಾ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಥ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಮಹೇಶ್ವರಪ್ಪ ಮಾತನಾಡಿ, ಕನ್ನಡ ರಥಕ್ಕೆ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಕನ್ನಡ ಮನಸ್ಸುಗಳು ಬೆಂಬಲಿಸುತ್ತಿವೆ. ಶಾಲಾ ಮಕ್ಕಳ ನೃತ್ಯ, ಕುಂಭ ಮೇಳ, ವಾದ್ಯವೃಂದಗಳ ಮೂಲಕ ಸ್ವಾಗತ ಕನ್ನಡ ರಥಕ್ಕೆ ಮೆರಗು ನೀಡಿದೆ, ಸಮ್ಮೇಳನದ ಯಶಸ್ವಿಗೆ ಸಾಕ್ಷಿಯಾಗಿದೆ. ಇದೇ ದಿನಾಂಕ 13 ರಂದು ಜಗಳೂರಿನ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಗಳನ್ನು ಸಾರುವ ಸಾಕ್ಷ್ಯ ಚಿತ್ರ ಬಿಡುಗಡೆ ಹಾಗೂ ರಸಮಂಜರಿ, ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ತಾ.ಪಂ.ಇಓ ಕೆಂಚಪ್ಪ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜನತೆಗೆ ಕಾರ್ಯಕ್ರಮಗಳ ಬಗ್ಗೆ ಪಿಡಿಓ ಗಳು ಮಾಹಿತಿ ನೀಡಬೇಕು. ಮೂರು ದಿನಗಳ ಕಾಲ ನುಡಿ ಹಬ್ಬದ ಸಂಭ್ರಮಿಸೋಣ ಎಂದರು.
ಪಲ್ಲಾಗಟ್ಟೆ, ಅಸಗೋಡು, ಬಿಳಿಚೋಡು, ಹಾಲೇಕಲ್ಲು, ಗುತ್ತಿದುರ್ಗ, ಗ್ರಾ.ಪಂ ವ್ಯಾಪ್ತಿಯಲ್ಲಿ ರಥ ಸಂಚರಿಸಿ ದೇವಿಕೆರೆಯಲ್ಲಿ ವಾಸ್ತವ್ಯ ಹೂಡಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ್, ಸಿಡಿಪಿಓ ಕಛೇರಿ ಮೇಲ್ವಿಚಾರಕರಾದ ಶಶಿಕಲಾ, ಎಚ್.ವಿ. ಶಾಂತಮ್ಮ, ಕನ್ನಡ ರಥ ನಿರ್ವಹಣಾಸಮಿತಿಯ ಸದಸ್ಯರುಗಳಾದ ಹಟ್ಟಿ ತಿಪ್ಪೇಸ್ವಾಮಿ, ಮಾಜಿ ಮಂಜುನಾಥ್, ಬಸವರಾಜ್, ರಾಜಪ್ಪ ವ್ಯಾಸಗೊಂಡನಹಳ್ಳಿ, ಮಾದಿಹಳ್ಳಿ ಮಂಜು ನಾಥ್, ಪಿಡಿಓ ಗಳಾದ ಶಶಿಧರ್ ಪಟೇಲ್, ಮರುಳಸಿದ್ದಪ್ಪ, ನಂದಿಲಿಂ ಗೇಶ್ವರ್, ಗ್ರಾ.ಪಂ ಅಧ್ಯಕ್ಷರಾದ ರೂಪ, ಗುರುಮೂರ್ತಿ, ಗ್ರಾ.ಪಂ ಸದಸ್ಯರಾದ ವೀರೇಶ್, ಆಜಾಮುಲ್ಲಾ, ಮುಖಂಡ ಪೂಜಾರ ಸಿದ್ದಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.