ಹೊಸಳ್ಳಿ ಮಠದಲ್ಲಿ ನರ್ಸಿಂಗ್ ಕಾಲೇಜು ಆರಂಭ

ಹೊಸಳ್ಳಿ ಮಠದಲ್ಲಿ ನರ್ಸಿಂಗ್ ಕಾಲೇಜು ಆರಂಭ

ಹೊಸಳ್ಳಿ : ಹೇಮ – ವೇಮ ವಿದ್ಯಾಪೀಠದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರಕಟ

ಮಲೇಬೆನ್ನೂರು, ಜ.6- ಹೊಸಳ್ಳಿ ವೇಮನ ಗುರುಪೀಠದ ವಿದ್ಯಾಪೀಠದ ಆಶ್ರಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದೆಂದು ಶ್ರೀ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಶನಿವಾರ ಹೊಸಳ್ಳಿಯ ವೇಮನ ಗುರುಪೀಠದ ಹೇಮ-ವೇಮ ಸದ್ಬೋಧನಾ ವಿದ್ಯಾಪೀಠ ಹಾಗೂ ಜ್ಞಾನಾಕ್ಷಿ ವಿದ್ಯಾನಿಕೇತನ ಮಹಾಯೋಗಿ ವೇಮನ ಪಿಯು ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ವೇಮಾನಂದ ಶ್ರೀಗಳು ಈ ವಿದ್ಯಾ ಪೀಠವನ್ನು ಹಣ ಗಳಿಸುವುದಕ್ಕಾಗಿ ಅಥವಾ ಹೆಸರು ಮಾಡುವುದಕ್ಕಾಗಿ ಸ್ಥಾಪನೆ ಮಾಡಿಲ್ಲ. ಗ್ರಾಮೀಣ ಪ್ರದೇಶದ ಎಲ್ಲಾ ವರ್ಗಗಳ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನಗಳಿಗೆ ಕಳುಹಿಸುವುದಕ್ಕಾಗಿ ಈ ವಿದ್ಯಾಪೀಠ ಪ್ರಾರಂಭಿಸಿ ಈಗಾಗಲೇ ಯಶಸ್ವಿಯಾಗಿದ್ದಾರೆ.

2019ರಲ್ಲಿ ಪ್ರಾರಂಭವಾದ ಪಿಯು ಕಾಲೇಜಿನಲ್ಲಿ ಆರಂಭದಲ್ಲಿ 19 ವಿದ್ಯಾರ್ಥಿಗಳು ಮಾತ್ರ ಇದ್ದರು. ಈಗ 685 ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಈ ವಿದ್ಯಾಪೀಠದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಟ್ಟು 2280 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದು, ಹರಿಹರ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿ ಗಳನ್ನು ಹೊಂದಿರುವ ವಿದ್ಯಾಪೀಠವಾಗಿ ಬೆಳೆದಿದೆ.

ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳ ಪೈಕಿ 13 ಜನ ವೈದ್ಯ, 323 ಇಂಜಿನಿಯರಿಂಗ್ ಸೇರಿದಂತೆ ಬಿ.ಕಾಂ, ಬಿ.ಎಸ್ಸಿ, ಬಿಸಿಎನಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಚಿತ ಸೀಟ್ ಪಡೆದು ಓದುತ್ತಿದ್ದಾರೆ. ಇಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ವಸತಿಯುತ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು, ಮುಂದಿನ ವರ್ಗ 2 ಸಾವಿರ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಆಗಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಹರಿಹರ ತಾ. ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ವೇಮನ ಗುರುಪೀಠದ ವಿದ್ಯಾಸಂಸ್ಥೆ ನಮ್ಮ ತಾಲ್ಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾಗಿದೆ ಎಂದರು.

ಕ್ಷೇತ್ರ ಶಿಕ್ಷಣ ಸಮಾನ್ವಯಾಧಿಕಾರಿ ಹೆಚ್.ಕೃಷ್ಣಪ್ಪ ಮಾತನಾಡಿ, ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣ ತುಂಬಾ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಗಮನ ಹರಿಸಬೇಕು. ಪೋಷಕರೂ ಕೂಡಾ ಮಕ್ಕಳ ಮೇಲೆ ಒತ್ತಡ ಹಾಕದೇ, ಅವರೊಂದಿಗೆ ಬೆರೆಯಿಸಿ, ಮಕ್ಕಳನ್ನು ಇನ್ನೊಬ್ಬರಿಗೆ ಹೊಲಿಕೆ ಮಾಡಬೇಡಿ ಎಂದರು.

ವಿದ್ಯಾಪೀಠದ ನಿರ್ದೇಶಕ ರಂಗಪ್ಪ ರೆಡ್ಡಿ, ಆಡಳಿತಾಧಿಕಾರಿ ಸುಭಾಷ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ವೇದಿಕೆಯಲ್ಲಿದ್ದರು. ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದರು.

error: Content is protected !!