ರಸ್ತೆ, ಚರಂಡಿ, ಸಿಸಿ ಕ್ಯಾಮೆರಾ, ಬೀದಿ ದೀಪ ಇತ್ಯಾದಿ…

ರಸ್ತೆ, ಚರಂಡಿ, ಸಿಸಿ ಕ್ಯಾಮೆರಾ, ಬೀದಿ ದೀಪ ಇತ್ಯಾದಿ…

ಹರಿಹರ: ನಗರಸಭೆ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಅನಾವರಣ

ಹರಿಹರ, ಜ.6- ಪಾದಚಾರಿಗಳಿಗೆ ಫುಟ್‍ಪಾತ್ ರಚನೆ, ಹರಿಹರೇಶ್ವರ ದೇವಸ್ಥಾನಕ್ಕೆ ಮೂಲ ಸೌಕರ್ಯ, ನಗರದ ರಸ್ತೆ, ಚರಂಡಿಗಳ ನಿರ್ಮಾಣ, ಕನ್ನಡ ಭವನ ನಿರ್ಮಾಣ, ಬೀದಿ ದೀಪ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ನಗರಸಭೆಯಲ್ಲಿ ಸೋಮವಾರ ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಇವರ ಅಧ್ಯಕ್ಷತೆಯಲ್ಲಿ ನಡೆದ 1ನೇ ಹಂತದ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರಿಂದ ಹರಿದು ಬಂದ ಸಲಹೆಗಳಿವು.

ವೃತ್ತಿ ನಿರತ ಸಿವಿಲ್ ಇಂಜಿನಿಯರ್‌ ಅಸೋಸಿಯೇಷನ್ ಅಧ್ಯಕ್ಷ ಶಿವಪ್ರಕಾಶ ಶಾಸ್ತ್ರಿ ಮಾತನಾಡಿ, ದಕ್ಷಿಣ ಕಾಶಿ ಖ್ಯಾತಿಯ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಏಕ ನಿವೇಶನ ಮಂಜೂರಾತಿ, ಕಟ್ಟಡ ಪರವಾನಿಗೆ ಪ್ರಕ್ರಿಯೆ ಸರಳೀಕರಣ ಮಾಡಬೇಕೆಂದು ಗಮನ ಸೆಳೆದರು.

ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿ, ಆಸ್ತಿಗಳಿಗೆ ಬಿ ಖಾತೆ ಉತಾರಾ ಕೊಡಬೇಕು, ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸಲು ಆಡಿಟೋರಿಯಂ ನಿರ್ಮಾಣ, ಶಾಲಾ ವಲಯವಾದ ಹರಪನಹಳ್ಳಿ ಹೆದ್ದಾರಿ ಯಲ್ಲಿ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದರು.

ಹಿರಿಯ ಕ್ರೀಡಾಪಟು ಎಚ್.ನಿಜಗುಣ ಮಾತನಾಡಿ, ರಸ್ತೆ ವಿಸ್ತರಣೆ ಸಮಯದಲ್ಲಿ ಅರೆ, ಬರೆ ತೆರವುಗೊಳಿಸಿದ ನಗರಸಭೆ ವಾಣಿಜ್ಯ ಸಂಕೀರ್ಣಗಳ ದುರಸ್ತಿ ಕಾರ್ಯ ಮಾಡಬೇಕು, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಹರಿಹರಕ್ಕೆ ನಗರದ ರೂಪ ನೀಡಬೇಕೆಂದರು.

ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಪ್ರೀತಮ್ ಬಾಬು ಮಾತನಾಡಿ, ನಗರದಲ್ಲಿ ಕೆಟ್ಟಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಪಡಿಸಬೇಕು, ನೂರಾರು ನಾಗರೀಕರು ವಾಯು ವಿಹಾರಕ್ಕೆ ಬರುವ ಡಿಆರ್‍ಎಂ ಶಾಲಾ ಮೈದಾನದಲ್ಲಿ ಬೀದಿ ದೀಪ ವ್ಯವಸ್ಥೆ ಮಾಡಬೇಕೆಂದರು.

ನಗರಸಭಾ ಸದಸ್ಯ ದಾದಾ ಖಲಂದರ್ ಮಾತನಾಡಿ, ಕಲ್ಯಾಣ ಮಂಟಪಗಳಿಂದ 6 ಕೋಟಿ ರೂ. ಕಂದಾಯ ಬಾಕಿ ಇದೆ, ಆದಷ್ಟು ಬೇಗ ವಸೂಲಾತಿ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು. ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ನಗರದಲ್ಲಿ ಕನ್ನಡ ಭವನ ನಿರ್ಮಾಣ ಹಾಗೂ ಹೈಸ್ಕೂಲ್ ಬಡಾವಣೆಯಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕೆಂದರು.

ನಗರಸಭೆ ಮಾಜಿ ಸದಸ್ಯ ರೇವಣಸಿದ್ದಪ್ಪ ಅಮರಾವತಿ ಮಾತನಾಡಿ, ಪ್ರಮುಖ ರಸ್ತೆಗಳಲ್ಲಿನ ಅಂಗಡಿಯವರು, ಫುಟ್‍ಪಾತ್ ವ್ಯಾಪಾರಿಗಳು ರಸ್ತೆಯನ್ನು ಅಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳ ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿದೆ, ರಸ್ತೆ ನಿರ್ಮಿಸಿದ ನಂತರ ಅಕ್ಕಪಕ್ಕ ಗ್ರಾವಲ್ ಹಾಕಬೇಕು, ನಗರಸಭೆ ಕಚೇರಿ ಮುಂದೆ ತೆರವುಗೊಳಿಸಿದ 22 ಮಳಿಗೆಗಳ ಬಾಡಿಗೆದಾರರಿಗೆ ಮಳಿಗೆ ನಿರ್ಮಿಸಿ ಕೊಡಬೇಕೆಂದರು.

ಕರವೇ ಗೌರವಾಧ್ಯಕ್ಷ ಬಿ.ಮಗ್ದುಮ್ ಮಾತನಾಡಿ, ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ಪದಾರ್ಥಗಳ ಮಾರಾಟಕ್ಕೆ ಅನುಕೂಲವಾಗುವ ಸೂಪರ್ ಮಾರ್ಕೆಟ್, ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕೆಂದರು.

ಸಭೆಯಲ್ಲಿ ನಗರಸಭಾ ಸದಸ್ಯರಾದ ನಿಂಬಕ್ಕ ಚಂದಾಪೂರ್, ಕೆ.ಜಿ.ಸಿದ್ದೇಶ್, ಎಂ.ಆರ್.ಮುಜಾಮ್ಮಿಲ್, ಆಟೋ ಹನುಮಂತಪ್ಪ, ದಿನೇಶ್ ಬಾಬು, ಬಿ.ಅಲ್ತಾಫ್, ಶಾಜಾದ್ ಸನಾಉಲ್ಲಾ, ಕೆ.ಬಿ.ರಾಜಶೇಖರ್, ಇಬ್ರಾಹಿಂ, ಪೌರಾಯುಕ್ತ ಸುಬ್ರಹ್ಮಣ್ಯ ನಾಡಿಗೇರ್, ಎಇಇ ವಿನಯ್ ಕುಮಾರ್, ವ್ಯವಸ್ಥಾಪಕಿ ನಿರಂಜನಿ, ತಾಪಂ ಮಾಜಿ ಅದ್ಯಕ್ಷ ಟಿ.ಜೆ.ಮುರುಗೇಶಪ್ಪ, ತಿಪ್ಪೇಶ್, ದಾದಾಪೀರ್, ಸೈಯದ್ ಸನಾಉಲ್ಲಾ, ಟಿ.ಜಬಿಉಲ್ಲಾ, ಆರಿಫ್ ಪಾಷಾ, ರಹಮತ್ ಉರ್ ರೆಹಮಾನ್, ಪ್ರವೀಣ್ ಜಿ.ವಿ. ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಸಲಹೆಗಳನ್ನು ನೀಡಿದರು.

error: Content is protected !!