ಜಗಳೂರು: ಸರ್ವರೂ ಸಹಕಾರ ನೀಡಿ ಎಂದ ಶಾಸಕ ದೇವೇಂದ್ರಪ್ಪ
ಜಗಳೂರು, ಜ.6- ಇದೇ ಜನವರಿ 11ಹಾಗೂ 12ರಂದು ಜಗಳೂರಿನಲ್ಲಿ ನಡೆಯಲಿರುವ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರು ಸಹಕಾರ ನೀಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.
ಶಾಸಕರ ಕಚೇರಿಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಸಿ, ಬೆಳೆಸಬೇಕು ಮತ್ತು ನಾಡಿನ ನೆಲ, ಜಲ, ಸಂಸ್ಕೃತಿ, ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಅರ್ಥಪೂರ್ಣವಾದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದರು.
ಬರದ ನಾಡಿನಲ್ಲಿ ಉತ್ತಮ ಮಳೆ- ಬೆಳೆಯಾಗಿದ್ದು ಇದರ ಅಂಗವಾಗಿ ಸಮ್ಮೇಳನದ ಮರುದಿನ ಜ.13ರಂದು “ಜಗಳೂರು ಜಲೋತ್ಸವ” ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲ್ಲೂಕಿನ ಭೌಗೋಳಿಕ, ಪ್ರಾಕೃತಿಕ ಮತ್ತು ಅರಣ್ಯ ಕುರಿತಾದ ವೈಶಿಷ್ಟ್ಯತೆಗಳನ್ನು ಬಿಂಬಿಸುವ ಒಂದು ಸಾಕ್ಷ್ಯ ಚಿತ್ರವನ್ನು ರಂಗ ನಿರ್ದೇಶಕ ಡಾ. ರಾಧಾಕೃಷ್ಣ ಪಲ್ಲಕ್ಕಿ ನಿರ್ಮಿಸಿದ್ದು, ಈ ಸಮಾರಂಭದಲ್ಲಿ ಪ್ರದರ್ಶಿಸಲಾಗುವುದು. ನಂತರ ಸಂಜೆ ಸರಿಗಮಪ ಖ್ಯಾತಿಯ ಅರ್ಜುನ್ ಜನ್ಯ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆಲ್ಲಾ ಸಂತೋಷದ ಸಂಗತಿ. ಎರಡು ದಿನಗಳ ಸಾಹಿತ್ಯ ಸಮ್ಮೇಳನ ಮತ್ತು ಒಂದು ದಿನದ ಜಗಳೂರು ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಹಾಗೂ ವಿವಿಧ ಸಮಿತಿಗಳ ಎಲ್ಲ ಸದಸ್ಯರು ಸಮ್ಮೇಳನದ ಯಶಸ್ಸಿಗೆ ನೆರವಾಗಲಿದ್ದಾರೆ ಎಂದು ಅವರು ತಿಳಿಸಿದರು. ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ, ಸಾಹಿತಿ ಎನ್.ಟಿ. ಎರಿಸ್ವಾಮಿ ಮತ್ತು ತಾಲ್ಲೂಕು ಕಸಾಪ ಅಧ್ಯಕ್ಷ ಕೆ. ಸುಜಾತಮ್ಮ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿ ಮಲ್ಲಿಕಾರ್ಜುನ್, ಗೀತಾ ಮಂಜುನಾಥ್, ಭರತ್ ಗ್ಯಾಸ್ ಓಬಣ್ಣ, ಷಂಶೀರ್ ಅಹ್ಮದ್ ಮುಂತಾದವರು ಇದ್ದರು.