ಹರಪನಹಳ್ಳಿ ಕಾರ್ಯಕ್ರಮದಲ್ಲಿ ಸೋಮಶೇಖರ್ ಬಣ್ಣದಮನೆ ಆಶಯ
ಹರಪನಹಳ್ಳಿ, ಜ. 5- ಬಿಜೆಪಿ ಮತ್ತು ಆರ್ಎಸ್‌ಎಸ್ ದೇಶದಲ್ಲಿ ಕೋಮುವಾದ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಕೆಪಿಸಿಸಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅಮಿತ್ ಶಾ ಹೇಳಿಕೆ ಖಂಡಿಸಿ ಇದೇ ತಿಂಗಳ 9 ರಂದು ಜಿಲ್ಲೆಯಾದ್ಯಂತ ರಾಜೀನಾಮೆಗೆ ಒತ್ತಾಯಿಸಿ ನಡೆಯಲಿರುವ ಪ್ರತಿಭಟನೆಯ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿಯು ಮನುವಾದದ ಮೂಲಕ ಜನ ಗಳಲ್ಲಿ ಮೌಢ್ಯತೆಯನ್ನು ಮೂಡಿಸುತ್ತಾ, ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುವ ಹುನ್ನಾರ ಎಸಗುತ್ತಿದೆ.
ಅಂಬೇಡ್ಕರ್ ರಚಿಸಿರುವ ಸಂವಿಧಾನ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ, ದಲಿತರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಎನ್ ಆರ್ ಸಿ ಸಿಎಎ ಯಂತಹ ಅನೌಪಚಾರಿಕ ಕಾಯ್ದೆ ಜಾರಿಗೆ ತಂದರು.
ದೇಶದ ಪ್ರಮುಖ ಮಠ ಮಾನ್ಯಗಳ ಸ್ವಾಮಿಗಳಿಂದ ಕೋಮುವಾದ ಸೃಷ್ಟಿಸುವ ಹೇಳಿಕೆಯನ್ನು ನೀಡುತ್ತಾ, ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೇವಲ ಶೇ. 3ರಷ್ಟು ಮಾತ್ರ ಇರುವ ಮೇಲ್ವರ್ಗದ ಜನರು ತಮ್ಮ ಹಿಡಿತದಲ್ಲಿ ದೇಶವನ್ನು ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಸಂವಿಧಾನ ರಕ್ಷಣಾ ಸಮಿತಿ ಸಂಚಾಲಕ ರಾಮಕೃಷ್ಣ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ, ಪಕ್ಷಾತೀತವಾಗಿ ಸಂವಿಧಾನ ಉಳಿಸುವ ಕೆಲಸವನ್ನು ಬಿಜೆಪಿ ಹೊರತು ಪಡಿಸಿ, ಎಲ್ಲಾ ಪಕ್ಷ ಮತ್ತು ವಿವಿಧ ಸಂಘಟನೆಗಳು ಮಾಡಬೇಕು. ಇಲ್ಲವಾದರೆ ದಲಿತರ ಮತದಾನದ ಹಕ್ಕು ಸೇರಿದಂತೆ, ಇತರೆ ಸೌಲಭ್ಯಗಳನ್ನು ಕಸಿದು ಕೊಳ್ಳುವ ಕೆಲಸಕ್ಕೆ ಬಿಜೆಪಿ ಕೈ ಹಾಕಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಎಂ.ವಿ. ಅಂಜಿನಪ್ಪ ಮಾತನಾಡಿ, ಸಂವಿಧಾನವು ದೇಶದ ಜನತೆಯನ್ನು ರಕ್ಷಿಸುವ ಮಹತ್ವದ ಭಾಗವಾಗಿದೆ ಎಂದರು.
ಕೊಡ್ಲಿ ಮಲ್ಲಿಕಾರ್ಜುನ, ಕೊಡ್ಕಿನಾಳ್ ಮಲ್ಲಿಕಾರ್ಜುನ, ಕಲ್ಮನಿ ವೀರಣ್ಣ, ಟಿ ವೆಂಕಟೇಶ, ವಕೀಲ ಭೀಮಪ್ಪ ಮಾತನಾಡಿದರು. ತಾಲೂಕು ಚಲುವಾದಿ ಮಹಾಸಭಾ ಅಧ್ಯಕ್ಷ ಪ್ರತಾಪ್ ಛಲವಾದಿ, ಮುಖಂಡರಾದ ಜಾಕೀರ್ ಸರ್ಖಾವಸ್, ಎಚ್ ಎಂ ಸಂತೋಷ, ಸಂದೇರ ಪರಶುರಾಮ, ಸಿ. ಬಸವರಾಜ್, ಪ್ರಭಾಕರ್ ಸಿ., ಜಂಬಯ್ಯ ನಾಯಕ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.