ದಾವಣಗೆರೆ, ಜ. 5- ದಾರಿಯಲ್ಲಿ ಬಿದ್ದ ಕಲ್ಲಿನ ಮೇಲೆ ದೇವರ ಚಿತ್ರ ಬಿಡಿಸಿ, ಅದಕ್ಕೆ ಭಾವನಾತ್ಮಕ ರೂಪ ನೀಡಿ, ದೈವತ್ವ ಒದಗಿಸುವ ಅದ್ಭುತ ಶಕ್ತಿ ಚಿತ್ರಕಲೆಗಿದೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಭಾನುವಾರ ದಾವಣಗೆರೆ ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ವೇದಿಕೆ-6 ರಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಲಾವಿದ ತನ್ನ ಭಾವನೆಯಿಂದ ದೈವತ್ವ ಕಲ್ಪಿಸಿದ ಕಲ್ಲಿಗೆ ಜನರು ಕೈಮುಗಿಯುತ್ತಾರೆ. ಖಾಲಿ ಹಾಳೆಯ ಮೇಲೆ ಜಗತ್ತನ್ನು ಬಿಂಬಿಸುವ ಶಕ್ತಿ ಚಿತ್ರಕಲೆಗಿದೆ. ಇಂತಹ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ.
ಇಂದು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಚಿತ್ರಕಲಾ ಸ್ಪರ್ಧಾಳುಗಳಿಗೆ ಯುವಜನೋತ್ಸವ ಉತ್ತಮ ವೇದಿಕೆ ಕಲ್ಪಿಸಿದೆ ಎಂದರು.
ಜಲಸಂರಕ್ಷಣೆಯ ವಿಷಯದ ಕುರಿತು ಸ್ಪರ್ಧಿಗಳು ತಮ್ಮ ಭಾವಭಿತ್ತಿಯನ್ನು ಬಿಳಿ ಕ್ಯಾನವಾಸ್‍ಗಳ ಮೇಲೆ ಬಣ್ಣಗಳಿಂದ ಮೂಡಿಸಿದರು. ಒಟ್ಟು ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಾಳುಗಳಿಗೆ 90 ನಿಮಿಷ ಕಾಲಾವಕಾಶ ನೀಡಲಾಗಿತ್ತು.
ತೀರ್ಪುಗಾರರಾಗಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯರಾಜ್ ಚಿಕ್ಕ ಪಾಟೀಲ್, ನಿವೃತ್ತ ಪ್ರಾಚಾರ್ಯ ರವೀಂದ್ರ ಕಮ್ಮಾರ, ಧಾರವಾಡ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ರೇಣುಕಾ ಮಾರ್ಕಂಡೆ, ಕಲಬುರ್ಗಿಯ ಹಿರಿಯ ಚಿತ್ರ ಕಲಾವಿದ ಬಾಬುರಾವ್ ಮೇಲಿನಮನೆ ಕಾರ್ಯನಿರ್ವಹಿಸಿದರು.
ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ ಹಾಗೂ ವಯಸ್ಕರ ಸಹಾಯಕ ಶಿಕ್ಷಣಾಧಿಕಾರಿ ಪೂರ್ಣಿಮಾ, ದೃಶ್ಯ ಮಹಾವಿದ್ಯಾಲಯದ ಬೋಧನಾ ಸಹಾಯಕ ಪ್ರಮೋದ್. ಕೆ.ವಿ. ಸ್ಪರ್ಧೆಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.
ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಶಾಸಕರಾದ ಬಸವರಾಜು ವಿ. ಶಿವಗಂಗಾ ಹಾಗೂ ಬಿ.ಪಿ.ಹರೀಶ್ ಕ್ಯಾನವಾಸ್ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು.