ಗುರುಗಳ ಸ್ಥಾನಕ್ಕೆ ಶಿಷ್ಯನೂ ಆಯ್ಕೆ ಆದದ್ದು ಸಂತಸ ತಂದಿದೆ

ಗುರುಗಳ ಸ್ಥಾನಕ್ಕೆ ಶಿಷ್ಯನೂ ಆಯ್ಕೆ ಆದದ್ದು ಸಂತಸ ತಂದಿದೆ

ಜಗಳೂರಿನಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಪ್ರೊ. ಸಿ.ವಿ‌ ಪಾಟೀಲ್

ಹರಿಹರ, ಜ.5-  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ, ಗುರುಗಳು ಅಧ್ಯಕ್ಷರಾಗಿದ್ದ  ಸ್ಥಾನಕ್ಕೆ ಅವರ ಶಿಷ್ಯ  ಕೂಡ ಆಯ್ಕೆಯಾಗಿರುವುದು ಅತೀವ ಸಂತಸವನ್ನು ನೀಡಿದೆ ಎಂದು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ನಿವೃತ್ತ ಪ್ರೊ. ಸಿ.ವಿ‌ ಪಾಟೀಲ್ ಹೇಳಿದರು.

ಜಗಳೂರು ನಗರದಲ್ಲಿ ಇದೇ ದಿನಾಂಕ 11-12 ರಂದು ನಡೆಯುವ 14ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ.ಎ.ಬಿ. ರಾಮಚಂದ್ರಪ್ಪನವರಿಗೆ ನಗರದ ಪ್ರವಾಸಿ ಮಂದಿರದಲ್ಲಿ, ಸಾಹಿತ್ಯ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನಾದ್ಯಂತ ಮತ್ತು ಜಿಲ್ಲೆಯ ಹಲವಾರು ಕಡೆಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಸಾಕಷ್ಟು ನಡೆದಿವೆ. ಆದರೆ ಹರಿಹರ ನಗರದಲ್ಲಿ ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಜಗಳೂರು ನಗರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಒಂದು ರೀತಿಯ ವೈಶಿಷ್ಟ್ಯತೆಯನ್ನು ಹೊಂದಿದೆ. ಕಾರಣ  ಎ.ಬಿ. ರಾಮಚಂದ್ರಪ್ಪನವರು ನನ್ನ ವಿದ್ಯಾರ್ಥಿ ಹಾಗೂ ವೃತ್ತಿಯಲ್ಲಿ ಜೊತೆಗೆ ಪ್ರಾಧ್ಯಾಪಕ ಕೆಲಸವನ್ನು ಮಾಡಿದ್ದವರು. ಇಂತಹ ವ್ಯಕ್ತಿಗೆ  ನಾನು ಕನ್ನಡ ಧ್ವಜವನ್ನು ಹಸ್ತಾಂತರ ಮಾಡುವ ಸೌಭಾಗ್ಯ ಸಿಕ್ಕಿರುವುದು ಅತೀವ ಸಂತಸವನ್ನು ತರಿಸಿದೆ. ಇಂತಹ ಸೌಭಾಗ್ಯ ನಾಡಿನಾದ್ಯಂತ ಯಾರಿಗೂ ಸಿಕ್ಕಿರುವುದಿಲ್ಲ ಎಂದು ಹೇಳಿದರು.    

 ಸಾಹಿತ್ಯ ಕ್ಷೇತ್ರ ಸೇರಿದಂತೆ ತಮಗೆ ಇಷ್ಟವಾದ ರೀತಿಯಲ್ಲಿ ಹೋರಾಟದ ಮೂಲಕ ‌ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಿರುವ ಎ.ಬಿ. ರಾಮಚಂದ್ರಪ್ಪನವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು  ಸಂತಸದ ವಿಚಾರ ಎಂದು  ಮಾಜಿ ನಗರಸಭೆ ಅಧ್ಯಕ್ಷ ಬಿ. ರೇವಣಸಿದ್ದಪ್ಪ  ಹೇಳಿದರು.

 ಸಮ್ಮೇಳನದ ಸರ್ವಾಧ್ಯಕ್ಷ ಎ.ಬಿ‌. ರಾಮಚಂದ್ರಪ್ಪ ಮಾತನಾಡಿ, ನಾನು ತಳಮಟ್ಟ ದಿಂದ ಇಂತಹ ದೊಡ್ಡ ಸ್ಥಾನವನ್ನು ಅಲಂಕರಿಸುವ ಮಟ್ಟದಲ್ಲಿ ಸಾಗಿ ಬರುವುದಕ್ಕೆ, ಎಲ್ಲರ ಸಹಕಾರ ಬಹಳಷ್ಟಿದೆ. ಎಲ್ಲಾ ಹಂತಗಳಲ್ಲಿ ನಾನು ಕೂಡ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವೆ. ಈ ಬಾರಿ ನಡೆಯುವ ಸಮ್ಮೇಳನದಲ್ಲಿ ಶೋಷಿತ ಜನರ ಮತ್ತು ಬಡವರ ಏಳಿಗೆಗಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಹಲವಾರು ನಿರ್ಣಯ ಕೈಗೊಂಡು ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಶ್ರಮ ವಹಿಸುವುದಾಗಿ ಹೇಳಿದರು.   

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರ ಮುನಿ, ಸಾಹಿತಿ ಜೆ. ಕಲೀಂ ಬಾಷಾ, ಶೇಖರಗೌಡ ಪಾಟೀಲ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ಶುಭ ಹಾರೈಸಿದರು.   

ನಿವೃತ್ತ ಪ್ರಾಂಶುಪಾಲ ಎಸ್.ಹೆಚ್. ಪ್ಯಾಟಿ,  ಕರುಣಾಕರ್, ಕುಮಾರ್  ಹನುಮಂತಪ್ಪ, ಆರ್.ಆರ್. ಕಾಂತರಾಜ್, ಜೆ.ಕೆ. ಮಲ್ಲಿಕಾರ್ಜುನ ಯಕ್ಕೆಗೊಂದಿ ರುದ್ರಗೌಡ್ರು, ರೇವಣಸಿದ್ದಪ್ಪ ಅಂಗಡಿ ಇತರರು ಮಾತನಾಡಿದರು.   

ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷ ಜಿ.ಜೆ. ಮಲ್ಲಿಕಾರ್ಜುನ, ಆರ್.ಆರ್. ಕಾಂತರಾಜ್, ರೇವಣಸಿದ್ದಪ್ಪ ಅಂಗಡಿ, ಬಿ.ಎಂ. ನಿರಂಜನ, ಕುಮಾರ್ ಹನುಮಂತಪ್ಪ, ಹುಲಿಕಟ್ಟಿ ಚನ್ನಬಸಪ್ಪ ಹಾಗೂ ಇತರರು ಹಾಜರಿದ್ದರು.

ಮಾಜಿ ದೂಡ ಸದಸ್ಯ ಹೆಚ್. ನಿಜಗುಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆ ಪರಮೇಶ್ವರಪ್ಪ ಕತ್ತಿಗೆ, ಸ್ವಾಗತ, ನಿರೂಪಣೆ ಈಶಪ್ಪ ಬೂದಿಹಾಳ, ವಂದನಾರ್ಪಣೆಯನ್ನು ರಿಯಾಜ್ ಆಹ್ಮದ್ ಮಾಡಿದರು.

error: Content is protected !!