ನಾ.ಡಿಸೋಜ ಅಗಲಿಕೆಯಿಂದ ಸಾಹಿತ್ಯಕ್ಕೆ ಬಡತನ

ನಾ.ಡಿಸೋಜ ಅಗಲಿಕೆಯಿಂದ ಸಾಹಿತ್ಯಕ್ಕೆ ಬಡತನ

ಶ್ರದ್ಧಾಂಜಲಿ ಹಾಗೂ ನುಡಿ-ನಮನ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ

ದಾವಣಗೆರೆ, ಜ.6- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡದ ಹಿರಿಯ ಸಾಹಿತಿ ನಾ. ಡಿಸೋಜ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು, ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಹಾಗೂ ಕಸಾಪ ಪದಾಧಿಕಾರಿಗಳು ಡಿಸೋಜ ಅವರನ್ನು ನೆನೆದು ಭಾವುಕರಾಗಿ ಕಂಬನಿ ಮಿಡಿದರು.

ಜಿಲ್ಲಾ ಕಸಾಪ ವತಿಯಿಂದ ನಗರದ ಕುವೆಂಪು ಕನ್ನಡ ಭವನದದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿ-ನಮನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾ. ಡಿಸೋಜ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗಣ್ಯರು ನುಡಿ-ನಮನ ಸಲ್ಲಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ, ಕರಾವಳಿಯ ದೀಪವಾಗಿದ್ದ ನಾ. ಡಿಸೋಜ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಪ್ರಸಿದ್ದ 2 ನಾಟಕಗಳು ಸಿನಿಮಾ ರೂಪ ಪಡೆದು ಬಹು ಜನರ ಮೆಚ್ಚುಗೆ ಪಡೆಯುವುದಲ್ಲದೇ, ರಾಷ್ಟ್ರ ಪ್ರಶಸ್ತಿ ಗಳಿಸಿವೆ ಎಂದು ಅವರನ್ನು ಸ್ಮರಿಸಿದರು.

ಹದಡಿಯಲ್ಲಿ ನಡೆದ ತಾಲ್ಲೂಕು ಸಮ್ಮೇಳನದಲ್ಲಿ ಕೇಳಿದ್ದ ಅವರ ಕ್ರೀಯಾಶೀಲ ಮಾತುಗಳನ್ನು ಮರೆಯಲು ಆಗುವುದಿಲ್ಲ. 2014ರಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವರ ಸರ್ವಾಧ್ಯಕ್ಷತೆಯಲ್ಲಿ ನನಗೆ ಸನ್ಮಾನ ಲಭಿಸಿತ್ತು ಎಂದು ನೆನಪಿಸಿಕೊಂಡರು.

ಕಥೆ, ನಾಟಕ, ಕಾದಂಬರಿ ಹಾಗೂ ಮಕ್ಕಳ ಸಾಹಿತ್ಯ ರಚಿಸಿದ್ದ ನಾ. ಡಿಸೋಜ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಬಡತನ ಬಂದಂತಾಗಿದೆ ಎಂದು ಶೋಕಿಸಿದರು.

ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜಾ ಮಾತನಾಡಿ, ದೊಡ್ಡ ಸಾಹಿತಿಯಾಗಿದ್ದರೂ ಬಹಳ ಸರಳ ಸಜ್ಜನಿಕೆಯಿಂದ ಬದುಕಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ಅವರ ಕಥೆ, ಕಾದಂಬರಿಗಳನ್ನು ಅವರ ಅಭಿಮಾನಿಯಾಗಿದ್ದೆ. ನಂತರದ ದಿನಗಳಲ್ಲಿ ಉತ್ತಮ ಒಡನಾಟ ಬೆಳೆಯಿತು ಎಂದು ನುಡಿನಮನ ಸಲ್ಲಿಸಿದರು.

ನಾ. ಡಿಸೋಜ ಕೇವಲ ಕನ್ನಡ ಸಾಹಿತ್ಯ ಕ್ಷೇತ್ರ ಅಷ್ಟೆ ಅಲ್ಲದೇ, ಕೊಂಕಣಿ ಭಾಷೆಯಲ್ಲೂ ಸಾಹಿತ್ಯ ಕೃಷಿ ನಡೆಸಿದ್ದರು. ಕನ್ನಡ ಸಾಹಿತ್ಯಕ್ಕೆ 98 ಕೃತಿಗಳನ್ನು ಕೊಡುಗೆ ನೀಡಿದ ಅವರಿಂದ ಇನ್ನು 2 ಕೃತಿಗಳು ಬರಬೇಕಿತ್ತು ಎಂದರು.

ವ್ಯಕ್ತಿತ್ವಕ್ಕೆ ಬೆಲೆ ಕೊಡುವ ವ್ಯಕ್ತಿತ್ವ ಹೊಂದಿದ್ದರು. ಅತಿಥಿಗಳನ್ನು ಬಾಗಿಲಲ್ಲಿ ನಿಂತು ಕಾಯುವ ಸರಳತೆ ಅವರಲ್ಲಿತ್ತು. ಅವರ ಕಥೆ ಕಾದಂಬರಿಗಳೇ ನನ್ನಲ್ಲಿ ಸಾಹಿತ್ಯ ಆಸಕ್ತಿ ಮೂಡಿಸಿವೆ ಎಂದು ಹೇಳಿದರು.

ಲೇಖಕಿ ಚಂಪಾ ಮಾತನಾಡಿ, ನಾ. ಡಿಸೋಜ ಅವರ ಪ್ರೋತ್ಸಾಹದಿಂದ ನನ್ನ 14 ಕೃತಿಗಳು ಲೋಕಾರ್ಪಣೆಗೊಂಡಿವೆ. ನನಗೆ ಉತ್ತಮ ಮಾರ್ಗದರ್ಶಕರು ಮತ್ತು ಪ್ರೋತ್ಸಾಹಕರಾಗುವ ಜತೆಗೆ ನನ್ನ ಅನೇಕ ಕೃತಿಗಳಿಗೆ ಅವರೇ ಮುನ್ನುಡಿ ಬರೆದಿದ್ದಾರೆ ಎಂದು ಭಾವುಕರಾದರು.

ಕ್ರೈಸ್ತ ಧರ್ಮದ ಎಲ್ಲೆಯನ್ನು ಮೀರಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದ್ದರು. ನಾ. ಡಿಸೋಜ ಅವರ ಪರಿಚಯ ನನಗೆ ಆಗದೇ ಇದ್ದಿದ್ದರೇ ನಾನು ಲೇಖಕಿ ಆಗುತ್ತಿರಲಿಲ್ಲ ಎಂದು ಸ್ಮರಿಸಿದರು.

ಈ ವೇಳೆ ಕಸಾಪ ಗೌರವ ಕಾರ್ಯದರ್ಶಿ ಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಡ್ಯಾನಿಯಲ್ ಚಿಂದವಾಳ, ನಿವೃತ್ತ ಪದವಿಪೂರ್ವ ಉಪ ನಿರ್ದೇಶಕ ರುದ್ರಮುನಿ, ವೆಂಕಟರಮಣ ಬೆಳೆಗೆರೆ, ಕೆ.ಪಿ.ಮರಿಯಾಚಾರ್, ಎಸ್.ಎಂ.ಮಲ್ಲಮ್ಮ, ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ರುದ್ರಾಕ್ಷಿ ಬಾಯಿ, ರುದ್ರಮುನಿ ಹಿರೇಮಠ, ವೀಣಾ ಮಹಾಂತೇಶ್, ಸತ್ಯಭಾಮ ಮಂಜುನಾಥ್, ಗಿರಿಜಾ ಸಿದ್ದಲಿಂಗಪ್ಪ ಇತರರು ಇದ್ದರು.

error: Content is protected !!