ಕೊಲನಪಾಕ (ತೆಲಂಗಾಣ) ಜ. 6 – ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು, ಜನರನ್ನು ನಾಸ್ತಿಕರ ನ್ನಾಗಿ ಮಾಡಬಾರದು. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಯಾದಾದ್ರಿ ಭುವನಗಿರಿ ಜಿಲ್ಲೆಯ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜರುಗಿದ 4ನೇ ದಿನದ ವಿಶೇಷ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಮನುಷ್ಯನಿಗೆ ಆಹಾರ, ನೀರು, ಗಾಳಿ, ದೈಹಿಕ ವಿಕಾಸಗೊಳಿಸಿದರೆ, ಧರ್ಮ ಬದುಕನ್ನು ವಿಕಾಸ ಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತದೆ. ಧರ್ಮಾ ಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗಲಾರದು. ಹಣತೆ ಜಗಕೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಶ್ರೀ ಗುರು ಶಿಷ್ಯನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾನೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳ ಮೂಲ ಗಂಗೋತ್ರಿಯಾಗಿದೆ ಎಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಣ ಕಳೆದುಕೊಂಡು ಮನುಷ್ಯ ಬದುಕಬಹುದು. ಆದರೆ ಗುಣ ಕಳೆದುಕೊಂಡು ಬದುಕಲಾಗದು. ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತವಾಗುವುದೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮನುಷ್ಯನಲ್ಲಿ ವಿಧೇಯತೆ, ಕರ್ತವ್ಯ ಶೀಲತೆ ಮತ್ತು ಪ್ರಾಮಾಣಿಕತೆ ಬೆಳೆದು ಬರಬೇಕು. ದೇವಸ್ಥಾನಗಳು ಪವಿತ್ರ ಕ್ಷೇತ್ರಗಳಾಗಿದ್ದು ಜನ ಸಮುದಾಯದಲ್ಲಿ ಸಾಮರಸ್ಯ, ಸದ್ಭಾವನೆ ಬೆಳೆಸುವ ಕೇಂದ್ರಗಳಾಗಿವೆ. ಅವುಗಳನ್ನು ಉಳಿಸಿ, ಬೆಳೆಸುವ ಸಂಕಲ್ಪ ಎಲ್ಲರದು ಆಗಬೇಕೆಂದರು.
ಮಳಲಿ ಮಠದ ಡಾ. ನಾಗಭೂಷಣ ಶಿವಾ ಚಾರ್ಯರು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಮಂಗಲಗಿರಿಯ ಡಾ. ಶಂಭು ಸೋಮನಾಥ ಶಿವಾ ಚಾರ್ಯರು, ತೊಟ್ನಳ್ಳಿ ಡಾ. ತ್ರಿಮೂರ್ತಿ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾ ಚಾರ್ಯರು, ತೊನಸನಹಳ್ಳಿ ಚರಂತೇಶ್ವರ ಮಠದ ರೇವಣಸಿದ್ಧ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ನೀಲುಗಲ್ಲು ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು, ರಾಯಚೂರು ವೀರಸಂಗಮೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.
ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಶಿವಶರಣಪ್ಪ ಸೀರಿ, ಗುರುಪಾದಪ್ಪ ಕಿಣಗಿ, ಅಮೃತಪ್ಪ ಮಲಕಪ್ಪಗೌಡರ, ಬೆಂಗಳೂ ರಿನ ಬೀರೂರು ಶಿವಸ್ವಾಮಿ, ನಂದೀಶ ದಾಸರಹಳ್ಳಿ, ಚಂದ್ರು ಬೆಂಗಳೂರು, ಅರ್ಚಕ ಗಂಗಾಧರ ಸ್ವಾಮಿ ಮತ್ತು ಇತರರು ಪಾಲ್ಗೊಂಡಿದ್ದರು. ಸಿದ್ಧರ ಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿ ದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಬಳಗದವರಿಂದ ಅನ್ನ ದಾಸೋಹ ಜರುಗಿತು.