ಜಗಳೂರು, ಜ. 3 – ಶಿಕ್ಷಣದಿಂದ ಮಾತ್ರ ಶೋಷಿತ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಆಯೋಜಿಸಲಾಗಿದ್ದ 207ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುವಾದ ಶೂದ್ರಾತಿ ಶೂದ್ರರನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ದುಂಡು ಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಬಿಟ್ಟ ಬಾಣ ಶೂದ್ರಾತಿ ಶೂದ್ರರನ್ನು ತಲೆ ಎತ್ತುವಂತೆ ಮಾಡಿತು. ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ. ಕೇವಲ ಮೀಸಲಾತಿಗಾಗಿ ಭಿಕ್ಷಾಪಾತ್ರೆ ಹಿಡಿದು ಹೋರಾಟ ನಡೆಸುವ ಮೇಲ್ವರ್ಗದವರು ಅಂಬೇಡ್ಕರ್ ಅವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.
ಅಂಬೇಡ್ಕರ್ ಕೊಟ್ಟ ಸಂವಿಧಾನ ಬದ್ದ ಎಸ್‌ಟಿ ಮೀಸಲಾತಿಯಿಂದ ನನ್ನ ಪುತ್ರ ಉನ್ನತ ಮಟ್ಟದ ಅಧಿಕಾರಿಯಾಗಿದ್ದು. ನಾನು ಶಾಸಕನಾಗಿ ಆಯ್ಕೆಯಾ ಗಿರುವೆ ಎಂದು ಸಂತಸ ವ್ಯಕ್ತಪಡಿಸಿದರು. ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಸಂವಿಧಾನದ ಉಳಿವಿಗಾಗಿ ಶೋಷಿತ ಸಮುದಾಯದ ಯುವಕರು ಪಕ್ಷಾತೀತ, ಜಾತ್ಯತೀತ ವಾಗಿ ಜಾಗೃತರಾಗಬೇಕಿದೆ. ದಲಿತ ಸಂಘಟನೆಗಳು ಪಕ್ಷ, ಜಾತಿಗಳಿಂದ ಛಿದ್ರ ಛಿದ್ರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ನಿವೃತ್ತ ಡಿವೈಎಸ್‌ಪಿ ಪ್ರಹ್ಲಾದ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಮಾರಣ್ಣ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್ ಮರೇನಹಳ್ಳಿ, ಪ.ಪಂ. ಸದಸ್ಯ ತಾನಾಜಿ ಗೋಸಾಯಿ, ಕುರಿ ಜಯ್ಯಣ್ಣ, ನಾಯಕ ಸಮಾಜದ ತಾಲ್ಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ, ವಕೀಲ ಸಣ್ಣ ಓಬಯ್ಯ, ಆರ್. ಓಬಳೇಶ್, ಮುಖಂಡರಾದ ಸಿ. ತಿಪ್ಪೇಸ್ವಾಮಿ, ಪೂಜಾರ್ ಸಿದ್ದಪ್ಪ, ಕುಬೇಂದ್ರಪ್ಪ, ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್ ಎಚ್.ಎಂ ಹೊಳೆ, ರಾಜಪ್ಪ ವ್ಯಾಸಗೊಂಡನಹಳ್ಳಿ, ಮಾದಿಹಳ್ಳಿ ಮಂಜಪ್ಪ, ಓಬಣ್ಣ, ಸತ್ಯಮೂರ್ತಿ ಇದ್ದರು