ದಾವಣಗೆರೆ, ಜ.3- ಮಗುವಿಗೆ ನಾಯಿ ಕಚ್ಚಿರುವುದರಿಂದ ಮಹಾನಗರ ಪಾಲಿಕೆ ಮತ್ತು ಪ್ರಾಣಿದಯಾ ಸಂಘಗಳ ವಿರುದ್ಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಕೀಲ ಅನಿಸ್ ಪಾಷಾ ಅವರ ತಮ್ಮನ ಮಗನಾದ ಲುಕ್ಮಾನ್ (12) ನಾಯಿ ಕಡಿತಕ್ಕೆ ಒಳಗಾಗಿದ್ದಾನೆ. ಈತನು ನ.12ರ ರಾತ್ರಿ 8.30ರ ವೇಳೆ ಭಗತ್ ಸಿಂಗ್ ನಗರದ 12ನೇ ಕ್ರಾಸ್‌ನಲ್ಲಿ ತನ್ನ ಸ್ನೇಹಿತನ ಮನೆಗೆ ಹೋಗುವಾಗ ಬೀದಿ ನಾಯಿಗಳು ಈತನ ಮೇಲೆ ದಾಳಿ ಮಾಡಿ ಕೈ-ಕಾಲುಗಳಿಗೆ ಕಚ್ಚಿವೆ.
ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು ಹಾಗೂ ವಯಸ್ಕರು ಹಗಲು ವೇಳೆಯೇ ಓಡಾಡುವುದು ಕಷ್ಟಕರವಾಗಿದೆ. ಈ ಹಿಂದೆಯೂ ಬಹಳಷ್ಟು ಜನರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ ಎಂದು ವಕೀಲ ಅನಿಸ್ ಪಾಷಾ ತಿಳಿಸಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಪಾಲಿಕೆಗೆ ಮನವಿ ಮಾಡಿಕೊಂಡಿದ್ದರೂ ಬೀದಿ ನಾಯಿ ನಿಯಂತ್ರಿಸಲು ನಿರ್ಲಕ್ಷ್ಯವಹಿಸಿದ್ದಾರೆ. ಆದ್ದರಿಂದ ಡಿ.14ರಂದು ಪಾಲಿಕೆ ಮತ್ತು ಪ್ರಾಣಿ ದಯಾ ಸಂಘಗಳ ವಿರುದ್ಧ ದೂರು ದಾಖಲಿಸಿದ್ದೇನೆ. ಇದಕ್ಕೂ ಕ್ರಮ ಕೈಗೊಳ್ಳದಿದ್ದರೆ ದಂಡ ಹಾಗೂ ಪರಿಹಾರ ನೀಡುವಂತೆ ಪಾಲಿಕೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ವಕೀಲರು ಎಚ್ಚರಿಕೆ ನೀಡಿದ್ದಾರೆ.