ಉಕ್ಕಡಗಾತ್ರಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಂದಿಗಾವಿ ಶ್ರೀನಿವಾಸ್ ಅಭಿಮತ
ಮಲೇಬೆನ್ನೂರು, ಜ.3- ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದ್ದು, ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಥಾನ ಸಮಿತಿಯ ಹರಿಹರ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.
ಅವರು, ಗುರುವಾರ ರಾತ್ರಿ ಉಕ್ಕಡಗಾತ್ರಿ ಗ್ರಾಮದಲ್ಲಿ ಗ್ರಾಮದ ಯುವಕರು ಹಮ್ಮಿಕೊಂಡಿದ್ದ ಮಹಾತ್ಮರ ದಿನಾಚರಣೆ ಮತ್ತು 5ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಬಹಳ ಶ್ರಮವಹಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಪೋಷಕರು, ಶಿಕ್ಷಕರ ಮತ್ತು ಸರ್ಕಾರಗಳ ಸಹಕಾರ, ಪ್ರೋತ್ಸಾಹದೊಂದಿಗೆ ಮಕ್ಕಳು ಚೆನ್ನಾಗಿ ಓದಿ ಮಾನವೀಯತೆ ಹೊಂದಿರುವ ಪ್ರಜೆಗಳಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಕೆಲಸವನ್ನು ಎಲ್ಲಾ ಗ್ರಾಮಗಳಲ್ಲಿ ಶಿಕ್ಷಣ ಕಲಿತ ಯುವಕರು ಮಾಡಬೇಕೆಂದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕವ ಮೂಲಕ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್ ಮಾತನಾಡಿ, ಹಳ್ಳಿಗಳಲ್ಲಿ ಮಾತ್ರ ನಿಜವಾದ ಸಂಸ್ಕಾರ, ಸಂಗೀತ ಉಳಿದಿದ್ದು, ಹಳ್ಳಿಗಳಲ್ಲಿ ಬೆಳೆದ ಮಕ್ಕಳಲ್ಲಿ ಔಪಚಾರಿಕ ಶಿಕ್ಷಣ ಜೊತೆಗೆ ಅನೌಪಚಾರಿಕ ಶಿಕ್ಷಣವೂ ಇರುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಗ್ರಾಮೀಣ ಸೊಗಡು, ಸಂಬಂಧಗಳು, ಕಷ್ಣ-ಸುಖದ ಅರಿವು ಹೆಚ್ಚಾಗಿರುತ್ತದೆ. ಮೌಲ್ಯಾ ಧರಿತ ಶಿಕ್ಷಣದಿಂದ ಮಕ್ಕಳ ಬದುಕು ಬಂಗಾರ ವಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಸೇರಿ ಮಕ್ಕಳನ್ನು ಬೆಳೆಸಬೇಕೆಂದು ಮಂಜುನಾಥ್ ಅಭಿಪ್ರಾಯಪಟ್ಟರು.
ಮಹಾತ್ಮರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವನ್ನು ಕಡ್ಡಾಯವಾದಾಗ ಮಾತ್ರ ಅವರಲ್ಲಿ ಹೊಸ ಚೈತನ್ಯ ಬೆಳೆಯಲು ಸಾಧ್ಯ ಎಂದು ಮಂಜುನಾಥ್ ಹೇಳಿದರು.
ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ಎಸ್.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು.
ಗ್ರಾ.ಪಂ. ಉಪಾಧ್ಯಕ್ಷ ಚಂದೇಗೌಡ, ಪಶು ವೈದ್ಯಾಧಿಕಾರಿ ಡಾ. ಅರುಣ್ ಮಾತನಾ ಡಿದರು. ಗ್ರಾ.ಪಂ. ಅಧ್ಯಕ್ಷ ಭಾರತಿ ಕಟಿಗೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಹರಿಹರ ತಾ.ಕುರುಬ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಗ್ರಾ.ಪಂ. ಸದಸ್ಯರಾದ ಹೇಮಂತ್, ದೇವೇಂದ್ರಪ್ಪ, ಶಂಕ್ರಪ್ಪ, ರಾಜಶೇಖರಯ್ಯ, ನಂದಿಗುಡಿಯ ವೀರಯ್ಯ, ಶ್ರೀಕಾಂತ್, ಕುಂಬಳೂರು ವಾಸುದೇವಮೂರ್ತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಗದಿಗೇಶ್ ಕಾಯಕದ ಪ್ರಾರ್ಥಿಸಿದರು. ವಕೀಲ ಮಂಜು ದೊಡ್ಮನಿ ಸ್ವಾಗತಿಸಿದರು. ಸಂಗೀತಾ ಬಂಗೇರ, ಲೀಲಾವತಿ ನಿರೂಪಿಸಿ, ವಂದಿಸಿದರು.