ಹರಿಹರ,ಜ.3- ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ನಾಡಿದ್ದು ದಿನಾಂಕ 5 ರ ಭಾನುವಾರ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯೋತ್ಸವ ಆಯೋಜಿಸಲಾಗಿದೆ. ಎಂದು ಮಾಜಿ ಶಾಸಕ ಎಸ್.ರಾಮಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 11.30ಕ್ಕೆ ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕನಕದಾಸರ ಪುತ್ಥಳಿ ಉದ್ಘಾಟಿಸುವರು. ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು, ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಸಾನ್ನಿಧ್ಯ ವಹಿಸುವರು. ಹರಿಹರ ತಾಲ್ಲೂಕಿನಿಂದ ಅಂದಾಜು 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಮುಖಂಡ ಎನ್.ಎಚ್.ಶ್ರೀನಿವಾಸ್ ಮಾತನಾಡಿ, ಜಯಂತಿ ನಿಮಿತ್ತ ನಾಳೆ ದಿನಾಂಕ 4ರ ಶನಿವಾರ ಬೆಳಿಗ್ಗೆ 9.30ಕ್ಕೆ ದಾವಣಗೆರೆ ಕಾಳಿದಾಸ ವೃತ್ತದಿಂದ ಬೈಕ್ ರಾಲಿ ಆಯೋಜಿಸಲಾಗಿದೆ. ನಾಡಿದ್ದು ದಿನಾಂಕ 5ರ ಭಾನುವಾರ ಬೆಳಗ್ಗೆ 9.30ಕ್ಕೆ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಗುವ ಬೃಹತ್ ಮೆರವಣಿಗೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು ಎಂದು ತಿಳಿಸಿದರು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹಾಲೇಶಪ್ಪ ಮಾತನಾಡಿ, ಕನಕದಾಸರು ಕೇವಲ ಕುರುಬರಿಗೆ ಮಾತ್ರ ಸೀಮಿತವಲ್ಲ, ಆದ್ದರಿಂದ ಜಿಲ್ಲೆಯ ಎಲ್ಲಾ ಸಮಾಜಗಳ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ಎಲ್ಲಾ ಶಾಸಕರುಗಳಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಪಾಲಿಕೆ ಸದಸ್ಯ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ವಕೀಲರಾದ ಎಂ.ನಾಗೇಂದ್ರಪ್ಪ, ಕೆ.ಬಿ.ರಾಜಶೇಖರ್, ಕರಿಬಸಪ್ಪ, ಶಿವಣ್ಣ, ರುದ್ರಣ್ಣ, ಸಿ.ಎನ್.ಹುಲಿಗೇಶ್ ಇತರರಿದ್ದರು.