ಯುವ ಸಮೂಹ ದೇಶದ ಆಸ್ತಿ, ಧನಾತ್ಮಕ ಚಿಂತನೆ ಬೆಳೆಸಲು ಮುಂದಾಗಿ ; ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ದಾವಣಗೆರೆ, ಜ. 2 – ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಇದೇ ದಿನಾಂಕ 5 ಮತ್ತು 6 ರಂದು ನಗರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿದ್ದು, ಇದರ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ನಾಳೆ ದಿನಾಂಕ 3 ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಅವರು ಸೋಮವಾರ ದೂಡಾ ಕಚೇರಿಯಲ್ಲಿ ಯುವಜನೋತ್ಸವ ಕಾರ್ಯ ಕ್ರಮದ ಅಂಗವಾಗಿ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರಿ, ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ರೊಂದಿಗೆ ಏರ್ಪಡಿಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಜನೋತ್ಸವ ಸಾಂಸ್ಕೃತಿಕ ಹಬ್ಬ, ಯುವ ಜನತೆ ದೇಶದ ಆಸ್ತಿಯಾಗಿದ್ದು ಯುವಕ, ಯುವತಿಯರಲ್ಲಿ ಧನಾತ್ಮಕ ಚಿಂತನೆಗಳನ್ನು ಬಿತ್ತಬೇಕಿದೆ. ಸಕಾರಾತ್ಮಕ ಚಿಂತನೆಗಳು ಯುವಜನೋತ್ಸವಗಳಿಂದ ಮೂಡಿ ಬರಲಿದ್ದು ಯುವ ಜನತೆಯನ್ನು ಇದರಲ್ಲಿ ತೊಡಗಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪದವಿ ಪೂರ್ವ ಕಾಲೇಜುಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ನಾಳೆ ಶುಕ್ರವಾರ ಬೆಳಗ್ಗೆ 8 ರಿಂದ ಗುಂಡಿ ವೃತ್ತದ ಬಳಿಯಿಂದ ಜಾಥಾ ನಡೆ ಯಲಿದ್ದು, ಪ್ರತಿಯೊಂದು ಕಾಲೇಜಿನಿಂದ ಕನಿಷ್ಠ 100ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗು ವಂತೆ ಮಾಡಬೇಕಾಗಿದೆ. ಜೊತೆಗೆ ಒಂದೊಂದು ಕಾಲೇಜಿನಿಂದ ಪ್ರತ್ಯೇಕವಾಗಿ ವಿಷಯಾಧಾರಿತವಾಗಿ ಘೋಷ ವಾಕ್ಯಗಳ ಫಲಕಗಳನ್ನು ಸಿದ್ದಪಡಿಸಿಕೊಂಡು ಜಾಥಾದಲ್ಲಿ ಭಾಗವಹಿಸಲು ಮತ್ತು ವಿಶೇಷ ವೇಷ-ಭೂಷಣದಲ್ಲಿಯೂ ವಿದ್ಯಾಥಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಜಾಥಾ ಮಾರ್ಗ; ಗುಂಡಿ ವೃತ್ತದಿಂದ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪಾಲಿಕೆ ಮುಂಭಾಗ ದಿಂದ ಎವಿಕೆ ಕಾಲೇಜು ರಸ್ತೆ ಮೂಲಕ ಮೋತಿ ವೀರಪ್ಪ ಕಾಲೇಜಿನ ವರೆಗೆ ಆಗ ಮಿಸಿ ಮುಕ್ತಾಯವಾಗಲಿದೆ. ಆಯಾ ಕಾಲೇ ಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಹೋಗುವ ಜವಾಬ್ದಾರಿ ನಿರ್ವಹಿಸಬೇಕೆಂದರು.
ಈ ವೇಳೆ ದೂಡಾ ಆಯುಕ್ತ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಹುಲ್ಲುಮನಿ ತಿಮ್ಮಣ್ಣ, ಸಹಕಾರ ಸಂಘಗಳ ಉಪನಿ ಬಂಧಕ ಮಧು ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವ ಪ್ರಶಸ್ತಿ ಪುರಸ್ಕೃತರಾದ ಮಾಗಾನಹಳ್ಳಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.