ಪ್ರೀತಿ, ಭಕ್ತಿ, ಗೌರವಗಳಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

ಪ್ರೀತಿ, ಭಕ್ತಿ, ಗೌರವಗಳಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

ಯಲವಟ್ಟಿ : ಸತ್ಸಂಗ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್ ಅಭಿಮತ

ಮಲೇಬೆನ್ನೂರು, ಜ.2- ಪರಸ್ಪರ ಪ್ರೀತಿ, ಭಕ್ತಿ, ಗೌರವದಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ. ಅಂತಹ ಪ್ರೀತಿ, ಭಕ್ತಿ, ಗೌರವಗಳನ್ನು ನಮಗೆ ಮಠ-ಮಂದಿರಗಳು ಮೊದಲಿನಿಂದಲೂ ಕಲಿಸುತ್ತಾ ಬಂದಿವೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ೆಎಸ್.ಮಂಜುನಾಥ್ ಹೇಳಿದರು.

ಯಲವಟ್ಟಿಯ ಶ್ರೀ ಗುರುಸಿದ್ಧಾಶ್ರಮದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.

ಶರಣರು, ದಾರ್ಶನಿಕರು, ಋಷಿ ಮುನಿಗಳು ಹುಟ್ಟಿದ ಈ ನೆಲದಲ್ಲಿ ಜಾತಿ, ಧರ್ಮಕ್ಕಿಂತ ಪ್ರೀತಿ, ಮಾನವೀಯತೆ, ಸಾಮರಸ್ಯ ಬಹಳ ಎತ್ತರದ ಸ್ಥಾನದಲ್ಲಿವೆ. ಯಾವ ಧರ್ಮದಲ್ಲೂ ಅಹಿಂಸೆಗೆ ಅವಕಾಶ ಇಲ್ಲ. ಎಲ್ಲಾ ಧರ್ಮಗಳೂ ಸಕಲ ಜೀವ ರಾಶಿಗಳಿಗೆ ಲೇಸನ್ನೇ ಬಯಸುತ್ತಾ ಬಂದಿವೆ. ಅಧರ್ಮದ ವಿರುದ್ಧ ಧರ್ಮ ಗೆಲ್ಲಬೇಕೆಂಬ ಉದ್ದೇಶ ದಿಂದ ಮಹಾಭಾರತ ಕಾಲದಲ್ಲಿ ಅಹಿಂಸೆಗಳು ನಡೆದಿವೆ ಎಂದು ಮಂಜುನಾಥ್ ತಿಳಿಸಿದರು.

ಪ್ರಸ್ತುತ ವಿಜ್ಞಾನದಲ್ಲಿ ನಾವು ಎಷ್ಟೇ ಪ್ರಗತಿ ಸಾಧಿಸಿದ್ದರೂ ಜ್ಞಾನ, ಭಕ್ತಿ, ನಂಬಿಕೆ, ಗೌರವ, ಮಾನವೀಯತೆ, ಪ್ರೀತಿ ಬಹಳ ಮುಖ್ಯವಾಗಿವೆ. ಅಂತಹವುಗಳನ್ನು ನಾವು ಶಾಲೆ – ದೇವಸ್ಥಾನ – ಮಠಗಳಲ್ಲಿ ಮಾತ್ರ ಕಾಣಲು ಸಾಧ್ಯ ಎಂದ ಮಂಜುನಾಥ್ ಅವರು, ಮಕ್ಕಳು ಬರೀ ಬುದ್ಧಿವಂತರಾದರೆ ಸಾಲದು ಹೃದಯವಂತಿಕೆ, ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕೆಂದರು.

ಹೃದಯವಂತಿಕೆ ಮಾನವೀಯತೆ ಇದ್ದವರು ಜ್ಞಾನಿಗಳಾಗುತ್ತಾರೆ ಎಂಬುದಕ್ಕೆ ಬುದ್ಧ, ಬಸವಣ್ಣ, ವಿವೇಕಾನಂದರು, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಇನ್ನೂ ಅನೇಕರನ್ನು ಹೆಚ್.ಎಸ್.ಮಂಜುನಾಥ್ ಉದಾಹರಣೆ ನೀಡಿದರು.

ಗ್ರಾಮದ ಮುಖಂಡ ಡಿ.ಯೋಮಕೇಶ್ವರಪ್ಪ ಮಾತನಾಡಿ, ಬುದ್ಧ ಮಾನವಕುಲಕ್ಕೆ ಒಳ್ಳೆಯದನ್ನು ಬಯಸಿದ್ದರಿಂದ ಅವರು ಜಗತ್ಪ್ರಸಿದ್ಧರಾದರು. ದಾಸ ಪರಂಪರೆ, ಶರಣ ಪರಂಪರೆ ಮತ್ತು ಆರೂಢ ಪರಂಪರೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೇ ಎಲ್ಲರಿಗೂ ಲೇಸನ್ನೇ ಬಯಸಿವೆ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಸಿರಿಗೆರೆ ಕುಂದೂರು ಮಂಜಪ್ಪ ಮಾತನಾಡಿ, ಎಲ್ಲಾ ಧರ್ಮಗಳ ಸಮನ್ವಯದ ಪುಣ್ಯಭೂಮಿಯಾಗಿ ಭಾರತ ದೇಶ ಬೆಳೆದು ಬಂದಿದೆ ಎಂದರು.

ಅಧ್ಯಾತ್ಮಿಕ ಚಿಂತಕ ಸಿರಿಗೆರೆಯ ಡಿ.ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸತ್ಯದ ಅನ್ವೇಷಣೆಯೇ ಸತ್ಸಂಗವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಕಲ ಜೀವರಾಶಿಗಳ ಪೈಕಿ ಮನುಷ್ಯನಿಗೆ ಮಾತ್ರ ಭಗವಂತ ವಿಶೇಷವಾದ ಜ್ಞಾನ, ಬುದ್ಧಿ, ಶಕ್ತಿ ಕೊಟ್ಟಿದ್ದಾನೆ. ಮನುಷ್ಯ ಅಂತಹ ವಿಶೇಷವಾದ ಜ್ಞಾನ, ಬುದ್ಧಿವಂತಿಕೆ ಬಳಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂದು ಹೇಳಿದರು.

ಗ್ರಾಮದ ಜಿ.ಆಂಜನೇಯ, ಜಿ.ಬಸಪ್ಪ ಮೇಷ್ಟ್ರು, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಿವೃತ್ತ ಯೋಧ ಶಿವಕುಮಾರ್, ಟಿ.ಮಂಜಪ್ಪ, ಎ.ಸುರೇಶ್, ಹೊರಟ್ಟಿ ಕರಿಬಸಪ್ಪ, ವೈ.ಸುರೇಶ್ ಶೆಟ್ಟಿ, ಎ.ಜಗದೀಶ್, ಮದಕರಿ, ಡಿ.ರಾಜಪ್ಪ, ಕುಂಬಳೂರಿನ ಭೂಪಾಲಪ್ಪ, ಪರಮೇಶ್ವರಪ್ಪ, ನಾಗರಾಜ್, ಸದಾಶಿವ, ಸಿರಿಗೆರೆಯ ಮಾಗೋಡ್ ಸಿದ್ದಣ್ಣ, ಮಲ್ಲಾಡರ ಕೃಷ್ಣಪ್ಪ, ಹನುಮಂತಪ್ಪ, ಜಿಗಳಿಯ ನಾಗಸನಹಳ್ಳಿ ಮಹೇಶ್ವರಪ್ಪ, ಬಿ.ನಿಂಗಾಚಾರಿ, ಪತ್ರಕರ್ತ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಯಲವಟ್ಟಿ ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿ, ವಂದಿಸಿದರು.

ಜಿಗಳಿ ಮತ್ತು ಯಲವಟ್ಟಿ ಭಜನಾ ತಂಡದವರು ಭಜನೆ ಮಾಡಿದರು. ಕುಂಬಳೂರಿನ ಕೆ.ಕುಬೇರಪ್ಪ, ಸಿರಿಗೆರೆಯ ಹೆಚ್.ಎಸ್.ವೆಂಕಟೇಶ್ ಗೌಡ ಭಕ್ತಿಗೀತೆ ಹಾಡಿದರು.

ಯಲವಟ್ಟಿಯ ಹೊಸಮನಿ ಮಲ್ಲಪ್ಪ ಕಾರ್ಯಕ್ರಮದ ದಾಸೋಹಿಗಳಾಗಿದ್ದರು.

error: Content is protected !!