ಹೊಸ ವರ್ಷಕ್ಕೆ ವೃದ್ಧೆಗೆ `ವಾತ್ಸಲ್ಯ’ ಮನೆ

ಹೊಸ ವರ್ಷಕ್ಕೆ ವೃದ್ಧೆಗೆ `ವಾತ್ಸಲ್ಯ’ ಮನೆ

ಹೊಳೆಸಿರಿಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ

ಮಲೇಬೆನ್ನೂರು, ಜ. 1- ಹೊಳೆಸಿರಿಗೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿರುವ  `ವಾತ್ಸಲ್ಯ’  ಮನೆಯನ್ನು ಕಡು ಬಡ ಮಹಿಳೆ ರಟ್ಟಿಹಳ್ಳಿ ಸಿದ್ದಮ್ಮ ಅವರಿಗೆ ಬುಧವಾರ ಹೊಸ ವರ್ಷದ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

`ವಾತ್ಸಲ್ಯ’ ಮನೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದ ನಂತರ ಹಾಲು ಉಕ್ಕಿಸುವ ಶಾಸ್ತ್ರ ಮಾಡಿ, ಗೋಮಾತೆಯ ಪ್ರವೇಶವನ್ನೂ ಮಾಡಿಸಲಾಯಿತು. 

ಬಳಿಕ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಎನ್.ಜಿ. ನಾಗನಗೌಡ್ರು ಟೇಪ್ ಕತ್ತರಿಸಿ ಹೊಸ ಮನೆಯನ್ನು ಉದ್ಘಾಟಿಸಿ, ದೀಪ ಬೆಳಗಿಸಿದರು.

ಈ ಸರಳ ಕಾರ್ಯಕ್ರಮದಲ್ಲಿ ಪ್ರಾಸ್ತಾ ವಿಕವಾಗಿ ಮಾತನಾಡಿದ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಅವರು, ಬಡವರ ಪರಿವರ್ತನೆ ಮತ್ತು ಏಳಿಗೆ ಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.  `ವಾತ್ಸಲ್ಯ’  ಯೋಜನೆ ಕಡು ಬಡವರಿಗೆ ವರದಾನವಾಗಿದ್ದು, ಜಾಗ ತೋರಿಸಿದರೆ ನಾವೇ ಮನೆ ಕಟ್ಟಿಸಿ, ಗೃಹ ಪ್ರವೇಶ ಮಾಡಿಸಿ, ಮನೆಗೆ ಅಗತ್ಯ ಸಾಮಾನುಗಳನ್ನೂ ಕೊಡುತ್ತೇವೆ.

ಮದ್ಯವರ್ಜನೆ ಶಿಬಿರ ಕೂಡಾ ಕುಡಿತಕ್ಕೆ ಒಳಗಾಗಿರುವ ಬಡವರನ್ನು ಕುಡಿತದಿಂದ ಹೊರತರಲು ಸಹಕಾರಿಯಾಗಲಿದೆ. 2025ರ ಹೊಸ ವರ್ಷದ ದಿನದಂದು ಸಿದ್ದಮ್ಮನವರಿಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿಸಿಕೊಟ್ಟಿರುವುದು ಬಹಳ ಸಂತೋಷ ತಂದಿದೆ ಎಂದು ಲಕ್ಷ್ಮಣ್ ಹೇಳಿದರು.

ಜ್ಞಾನವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀಮತಿ ನಾಗರತ್ನ ಮಾತನಾಡಿ, ಚಿತ್ರದುರ್ಗ ಪ್ರಾದೇಶಿಕ ಕಛೇರಿ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 197 ಮನೆಗಳು ನಿರ್ಮಾಣ ಹಂತದಲ್ಲಿದ್ದು, ದಾವಣಗೆರೆ ಜಿಲ್ಲೆಯಲ್ಲಿ 18 `ವಾತ್ಸಲ್ಯ’ ಮನೆಗಳನ್ನು ಈಗಾಗಲೇ ಹಸ್ತಾಂತರ ಮಾಡಿದ್ದೇವೆ. 

ಅಸಹಾಯಕರನ್ನು ಗುರುತಿಸುವ ಕೆಲಸ ನಮ್ಮ ಯೋಜನೆಯ ಮುಖ್ಯ ಗುರಿಯಾಗಿದ್ದು, ಪೋಷಕರನ್ನು ಪೋಷಣೆ ಮಾಡುವುದನ್ನು ಮಕ್ಕಳಿಗೆ, ಸೊಸೆಯಂದಿರಿಗೆ ಕಲಿಸ ಬೇಕೆಂ ಬುದು ಹೇಮಾವತಿ ಅಮ್ಮನವರ ಆಶಯ ವಾಗಿದೆ. 1898 ಬಡವರಿಗೆ `ವಾತ್ಸಲ್ಯ’ ಫುಡ್ ಕಿಟ್ ಮತ್ತು 1124 ಬಡವರಿಗೆ ಬಟ್ಟೆ ಕಿಟ್‌ಗಳನ್ನು ವಿತರಿಸಿದ್ದೇವೆ. `ವಾತ್ಸಲ್ಯ’ ಕಾರ್ಯಕ್ರಮ ಬಡವರ ಆಶಾಕಿರಣವಾಗಿದೆ ಎಂದು ನಾಗರತ್ನ ಹೇಳಿದರು.

ಫಲಾನುಭವಿ ಸಿದ್ದಮ್ಮ ಮಾತನಾಡಿ, ಇನ್ನೊಬ್ಬರ ಮನೆಯ ಕಟ್ಟೆಯ ಮೇಲೆ ವಾಸ ಮಾಡುತ್ತಿದ್ದ ನನಗೆ ಸ್ವಂತ ಮನೆ ಕಟ್ಟಿಸಿಕೊಟ್ಟಿರುವ ಧರ್ಮಸ್ಥಳ ಯೋಜನೆ ಮತ್ತು ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಚಿರಋಣಿ ಎಂದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಜಿ. ಮಂಜುನಾಥ್ ಪಟೇಲ್, ಜಿಗಳಿ ಪ್ರಕಾಶ್, ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಜ್ಞಾನವಿಕಾಸ ಮೇಲ್ವಿಚಾರಕಿ ಸವಿತಾ, ಹೊಳೆಸಿರಿಗೆರೆ ವಲಯ ಮೇಲ್ವಿಚಾರಕ ರಂಗಸ್ವಾಮಿ, ಗ್ರಾಮದ ನಿವೃತ್ತ ಯೋಧ ಪರಶುರಾಮ್, ಪ್ರಗತಿಪರ ಕೃಷಿಕ ಕುಂದೂರು ಮಂಜಪ್ಪ, ಅಧ್ಯಾತ್ಮಿಕ ಚಿಂತಕ ಡಿ. ಸಿದ್ದೇಶ್, ಮಲ್ಲಿಕಾರ್ಜುನ್ ಕಲಾಲ್, ಒಕ್ಕೂಟದ ಅಧ್ಯಕ್ಷರಾದ ಯಶೋಧಮ್ಮ, ಸರೋಜಮ್ಮ, ಸೇವಾ ಪ್ರತಿನಿಧಿಗಳಾದ ಜ್ಯೋತಿ, ಮಂಜುಳಾ, ನಾಗರಾಜ್ ಮತ್ತು ಇತರರು ಈ ವೇಳೆ ಹಾಜರಿದ್ದರು.

error: Content is protected !!