ಹೊಸಪಾಳ್ಯ ಕೆರೆಗೆ ಬಾಗಿನ ಅರ್ಪಣೆ

ಹೊಸಪಾಳ್ಯ ಕೆರೆಗೆ ಬಾಗಿನ ಅರ್ಪಣೆ

ಮಲೇಬೆನ್ನೂರು, ಜ.1- ಹೊಸಪಾಳ್ಯ ಗ್ರಾಮದ ಶ್ರೀ ಕರಿಯಮ್ಮ ದೇವಿ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಭಿವೃದ್ಧಿ ಪಡಿಸಿದ ಬಳಿಕ ಕೆರೆ ಭರ್ತಿಯಾಗಿದ್ದು, ಬುಧವಾರ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿ ಬಾಗಿನ
ಅರ್ಪಿಸಿದರು.

ಈ ವೇಳೆ `ಶುದ್ಧ ಜಲ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಅವರು, ರಾಜ್ಯದಲ್ಲಿ 780 ಮತ್ತು ದಾವಣಗೆರೆ ಜಿಲ್ಲೆಯಲ್ಲಿ 60 ಶುದ್ಧಗಂಗಾ ಘಟಕಗಳಿದ್ದು, ಗ್ರಾಮೀಣ ಜನರಿಗೆ ಶುದ್ಧ ನೀರನ್ನು ಪೂರೈಸುತ್ತಿದ್ದೇವೆ. ಫೆಬ್ರವರಿಯಿಂದ ಜೂನ್‌ವರೆಗೆ ಬೇಸಿಗೆ ಕಾಲ ಇರುವುದರಿಂದ ಜನರು ಶುದ್ಧ ನೀರನ್ನೇ ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು, ರಾಜ್ಯದಲ್ಲಿ ಶುದ್ಧ ಜಲ ಅಭಿಮಾನ ಆರಂಭಿಸಿದ್ದಾರೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು ಮಾತನಾಡಿ, 36 ವರ್ಷಗಳ ಹಿಂದೆ ನಾನು ಗ್ರಾ.ಪಂ. ಅಧ್ಯಕ್ಷನಾಗಿದ್ದಾಗ ಈ ಕೆರೆಯನ್ನು 60 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇವೆ. ಈಗ ಮತ್ತೆ ಕೆರೆಯನ್ನು ಧರ್ಮಸ್ಥಳ ಯೋಜನೆಯಿಂದ ಅಭಿವೃದ್ಧಿ ಪಡಿಸಿದ್ದು, ಕೆರೆಗೆ ಸುತ್ತಲು ತಂತಿಬೇಲಿ ಹಾಕಿಸಿ ಎಂದು ಸಲಹೆ ನೀಡಿದರು.

ಗ್ರಾಮದ ವಸಂತಪ್ಪ ಮಾತನಾಡಿ, ಕೆರೆ ಅಭಿವೃದ್ಧಿಯಿಂದ ಜನ – ಜಾನುವಾರಗಳಿಗೆ ತುಂಬಾ ಅನುಕೂಲವಾಗಿದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷ ಎನ್.ಪರಶುರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜಿ.ಮಂಜುನಾಥ್ ಪಟೇಲ್, ಜಿಗಳಿ ಪ್ರಕಾಶ್, ಕೊಕ್ಕನೂರಿನ ಹನುಮಂತರಾಯ, ಶ್ರೀ ಕರಿಯಮ್ಮ ದೇವಿ ಕೆರೆ ಸಮಿತಿ ಅಧ್ಯಕ್ಷ ಗದಿಗೆಪ್ಪ, ಸದಸ್ಯರಾದ ಭೀಮನಗೌಡ್ರು, ತಿಪ್ಪೇಶಪ್ಪ, ಶೇಖರಪ್ಪ, ನಾಗೇಂದ್ರಪ್ಪ, ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀಮತಿ ನಾಗರತ್ನ, ಜ್ಞಾನ ವಿಕಾಸ ಮೇಲ್ವೆಚಾರಕಿ ಸವಿತಾ, ವಲಯ ಮೇಲ್ವಿಚಾರಕ ರಂಗಸ್ವಾಮಿ, ಸಿರಿಗೆರೆಯ ನಿವೃತ್ತ ಯೋಧ ಪರಶುರಾಮ್, ಕುಂದೂರು ಮಂಜಪ್ಪ, ಡಿ.ಸಿದ್ದೇಶ್, ಮೆಣಸಿನಹಾಳ್ ರುದ್ರಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!