ಐದು ವರ್ಷಕ್ಕೊಮ್ಮೆ ನಡೆಯುವ ಹೋತನಹಳ್ಳಿ ಗ್ರಾಮದೇವಿ ಜಾತ್ರೆ

ಐದು ವರ್ಷಕ್ಕೊಮ್ಮೆ  ನಡೆಯುವ ಹೋತನಹಳ್ಳಿ ಗ್ರಾಮದೇವಿ ಜಾತ್ರೆ

ವಿಶೇಷ ಐದು ಮಂಗಳವಾರ ಊರು ಬಿಡುವ ಪದ್ದತಿ..!

ಹಾವೇರಿ,ಜ.2- ಬರುವ ಫೆಬ್ರವರಿಯಲ್ಲಿ ನಡೆಯುವ  ಗ್ರಾಮದೇವಿ ಜಾತ್ರೆಗೆ  ಐದು ಮಂಗಳವಾರ ದಿನಪೂರ್ತಿ ಗ್ರಾಮ ತೊರೆದು ಹೊರವಲಯದ ಹೊಲ-ಗದ್ದೆಗಳಲ್ಲಿದ್ದು, ಸಂಜೆ ಮನೆಗೆ ತೆರಳುವ ಪದ್ದತಿ ಜಿಲ್ಲೆಯ ಶಿಗ್ಗಾಂವ್‌ ತಾಲ್ಲೂಕು  ಹೋತನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ನಿನ್ನೆ ಆಚರಣೆಗೊಂಡ  ಈ ಗ್ರಾಮ ತೊರೆಯುವ ಪದ್ಧತಿ  ಜ.28 ರವರೆಗೆ  ಒಟ್ಟು ಐದು ವಾರ ನಡೆಯುವುದು.

ಈಗಾಗಲೇ ಮಾಸನಕಟ್ಟಿ, ಬೆಳಗಾಲ ಪೇಟೆ, ಬೊಮ್ಮನಹಳ್ಳಿ, ಹುನಗುಂದ, ಶಿಡ್ಲಾಪುರ ಹಾಗೂ ಹೂಲಿಕಟ್ಟಿ ರಸ್ತೆಗಳ ಮುಖ್ಯ ದ್ವಾರಗಳಲ್ಲಿ ದಿಗ್ಬಂಧನದ ನಾಮಫಲಕ ಹಾಕಲಾಗಿದ್ದು, ಆ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ ರಾಜ್ಯ ಸಾರಿಗೆ ವಾಹನಗಳು ಸೇರಿದಂತೆ ಯಾವ ವಾಹನಗಳೂ  ಸಂಚರಿಸುವುದಿಲ್ಲ ಎನ್ನಲಾಗಿದೆ.      

ಗ್ರಾಮಸ್ಥರು ಅಂದು ಸೂರ್ಯೋದಯದ ಮುನ್ನ ಮನೆಯಲ್ಲಿರುವ ಅಡುಗೆ ಸಾಮಗ್ರಿಗಳ ಜೊತೆ ದನ-ಕರು, ಕುರಿ, ಆಡು, ಕೋಳಿ, ನಾಯಿ. ಬೆಕ್ಕುಗಳು ಸೇರಿದಂತೆ ಹಾಸಿಗೆ, ಬಟ್ಟೆಗಳನ್ನು ತೆಗೆದುಕೊಂಡು ಮನೆ, ಪಡಸಾಲೆ ಹಾಗೂ ಅಂಗಳದಲ್ಲಿ ದೀಪ ಹಚ್ಚಿ, ಬಾಗಿಲಿಗೆ ಬೀಗ ಹಾಕಿ  ಮಹಿಳೆಯರು ಮಕ್ಕಳೊಂದಿಗೆ ಸೇರಿ ತಮ್ಮಲ್ಲಿರುವ ವಾಹನಗಳೊಂದಿಗೆ ಊರು ಬಿಡುತ್ತಾರೆ.  ಸಾಮೂಹಿಕವಾಗಿ ಊಟ- ಉಪಚಾರದ ನಂತರ ಸಂಜೆವರೆಗೆ ಕಾಲಕಳೆದು ಗ್ರಾಮಕ್ಕೆ ಮರಳುತ್ತಾರೆ.

ಜ. 31ರಂದು ದೇವಿಗೆ ದೃಷ್ಟಿಇಡುವುದು, ಫೆ.1 ಚಂಡಿ ಪಾರಾಯಣ, ಫೆ. 2 ರಂದು ಗಣಪತಿ ಪೂಜೆ, ಹೋಮ ಸಂಕಲ್ಪ, ಚಂಡಿ ಪಾರಾಯಣ, ಚಂಡಿಕಾ ಹವನ, ಮಹಾಮಂಗಳಾರತಿ ನಡೆಯುವುದು, ಫೆ. 3ರಂದು ಹೋಮ, ಫೆ. 4ರಂದು ಅರ್ಚಕರ ಕಾರ್ಯಕ್ರಮ,  ರಾತ್ರಿ ರಥೋತ್ಸವ ನಡೆಯಲಿದೆ. ಫೆ. 5ರಂದು ಗದ್ದುಗೆ ಹಾಕುವುದು, ಫೆ. 6 ರಿಂದ 11 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ಕೊನೆಯಲ್ಲಿ ಫೆ. 12ರಂದು ಪಾದಗಟ್ಟಿ ಬಿಡುವುದು ಸೇರಿದಂತೆ ಪದ್ದತಿ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳು  ನಡೆಯಲಿವೆ.

error: Content is protected !!