ಜಗಳೂರು, ಡಿ. 30- ಕಟ್ಟಡ ಕಾರ್ಮಿಕರ ಸಂಘಕ್ಕೆ ನಿವೇಶನ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.
ಜಗಳೂರು ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಿ ಸಂಘದ ಗೌರವಾಧ್ಯಕ್ಷ ಪಿ.ಆರ್.ತಿಪ್ಪೇಸ್ವಾಮಿ ಮಾತನಾಡಿ, ಅಸಂಘಟಿತ ವಲಯದಲ್ಲಿ ಶ್ರಮಿಕ ವರ್ಗವಾಗಿ ದುಡಿಯುತ್ತಿದ್ದೇವೆ. ನಾವು ಸಂಘಟಿತರಾಗಿ ಕಟ್ಟಡ ಕಾರ್ಮಿಕ ಸಂಘಟನೆ ಪ್ರಾರಂಭಿಸಿ ತಾಲ್ಲೂಕಿನ ಕಟ್ಟಡ ಕಾರ್ಮಿಕರ ಮೂಲ ಸೌಕರ್ಯ ಮತ್ತು ಮಕ್ಕಳ ವಿಧ್ಯಾಭ್ಯಾಸ ಹಾಗು ಆಕಸ್ಮಿಕ ಘಟನಾವಳಿಗಳು ಹೀಗೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೆಜ್ಜೆ ಹಾಕುತ್ತಿದ್ದೇವೆ.
ಕಟ್ಟಡ ಕಾರ್ಮಿಕರ ಸಭೆ ನಡೆಸಲು ಮತ್ತು ಸಮಸ್ಯೆಗಳನ್ನು ಆಲಿಸಲು ಸೂಕ್ತ ಕಟ್ಟಡ ಇಲ್ಲದೆ ಬಾಡಿಗೆ ಕೊಠಡಿಗಳಲ್ಲಿ ನಡೆಸುತ್ತಿದ್ದೇವೆ. ಆದ್ದರಿಂದ ಶಾಸಕರು ನಮ್ಮ ಸಮಸ್ಯೆಗೆ ಸ್ಪಂದಿಸಿ ಅಗತ್ಯ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಕೆ.ಎ.ಸಿರಾಜ್ ಖಾನ್ ಮಾತನಾಡಿ, ಸಂಘದ ಚಟುವಟಿಕೆಗಳನ್ನು ನಡೆಸಲು ನಮ್ಮ ಸಂಘಕ್ಕೆ ಅಗತ್ಯವಾಗಿ ನಿವೇಶನ ಮತ್ತು ಸಮುದಾಯ ಭವನ ಅವಶ್ಯಕವಾಗಿದೆ. ಪಟ್ಟಣದ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರುವ ಸ್ಥಳಗಳಲ್ಲಿ ನಮಗೆ ನಿವೇಶನ ಗುರುತಿಸಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕರು, ಶೀಘ್ರವೇ ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ನಿಮ್ಮ ಸಮುದಾಯ ಭವನ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಜೇಯ್, ಪ್ರಧಾನ ಕಾರ್ಯದರ್ಶಿ ಮುಜೀದ್, ಕಾರ್ಯದರ್ಶಿ ಆರಿಫ್ ಉಲ್ಲಾ, ಸಂಘಟನಾ ಕಾರ್ಯದರ್ಶಿ ಮಹಮದ್ ರಫೀಕ್, ಖಜಾಂಚಿ ಮಹಮದ್ ಮಷೀರ್, ಸಂಚಾಲಕ ನೂರ್ ಅಹಮದ್, ಸದಸ್ಯರಾದ ಹನುಮಂತಪ್ಪ, ಮಂಜಪ್ಪ, ಜಾವಿದ್, ಇಸ್ಮಾಯಿಲ್, ಓಬಳೇಶ್ ಇದ್ದರು.