ಡಾ. ಅಜೇಯ ಕುಮಾರ ಅಭಿಮತ
ದಾವಣಗೆರೆ, ಡಿ. 29 – ಕನ್ನಡಕ್ಕೆ ಸಾವಿಲ್ಲ, ಸವಾಲು ಗಳಿವೆ. ಈ ಸವಾಲುಗಳನ್ನು ಕನ್ನಡಿಗರು ದಿಟ್ಟತನದಿಂದ ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಡಾ.ವಿ.ಹೆಚ್. ಅಜೇಯ ಕುಮಾರ ತಿಳಿಸಿದರು.
ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ‘ಕನ್ನಡ ನಾಡು-ನುಡಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕನ್ನಡ ಭಾಷೆಯ ಮೇಲೆ ಹಿಂದಿ ಮತ್ತು ಸಂಸ್ಕೃತದ ಹೇರಿಕೆಗಳು ರಾಜಕೀಯ ಹಿತಾಸಕ್ತಿಯ ಉದ್ದೇಶ ಹೊಂದಿವೆ. ಹಾಗಾಗಿ ಇದನ್ನು ಧಿಕ್ಕರಿಸುವ ಕೆಲಸ ಕನ್ನಡಿಗರಿಂದ ಆಗಬೇಕು ಎಂದು ಹೇಳಿದರು.
ಕನ್ನಡ ಭಾಷೆಗೆ ತಾಯಿಯಷ್ಟೇ ಸ್ಥಾನಮಾನವಿದೆ. ಪ್ರಪಂಚದ ಅತ್ಯಂತ ಸುಂದರ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು, ನಾವು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿತಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಕರ್ನಾಟಕದಲ್ಲಿ ಮಧ್ಯ ಕರ್ನಾಟಕ ಭಾಷೆ ತುಂಬಾ ಶಕ್ತಿಯುತವಾಗಿದ್ದು, ಈ ಭಾಗಕ್ಕೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಮೊದಲಾದ ಭಾಷೆಯ ಪ್ರಭಾವವಿಲ್ಲ ಎಂದ ಅವರು, ಎಲ್ಲರೂ ಕನ್ನಡ ಬಳಸಿ, ಉಳಿಸಿ, ಬೆಳೆಸಿ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಎಂ.ಡಿ ಅಣ್ಣಯ್ಯ ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಎಲ್ಲರೂ ಉಳಿಸಿ-ಬೆಳಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕನ್ನಡವನ್ನು ಬಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ. ಅಂಜಿನಪ್ಪ, ಕಾಡಜ್ಜಿ ಶಿವಪ್ಪ, ಡಾ.ಬಿ.ಸಿ ರಾಕೇಶ್, ಮೊಹಮ್ಮದ್ ರಿಯಾಜ್, ಟಿ.ಎನ್. ಮೌನೇಶ್ವರ, ನಾಗರಾಜ, ಗಣೇಶ, ಫಕ್ಕೀರಪ್ಪ, ಡಿ. ಚಂದ್ರಪ್ಪ ಇತರರು ಇದ್ದರು.