ಹೊನ್ನಾಳಿ, ಡಿ.29 – ದಾವಣಗೆರೆಯಲ್ಲಿ ಜನವರಿ 5 ರಂದು ಕನಕದಾಸರ 537ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನಕದಾಸರ ಪುತ್ಥಳಿ ಅನಾವರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ ಎಂದು ದಾವಣಗೆರೆ ಕುರುಬ ಸಮಾಜದ ಮುಖಂಡ ಹಾಲೇಕಲ್ ಎಸ್.ಟಿ. ಅರವಿಂದ್ ತಿಳಿಸಿದರು.
ಪಟ್ಟಣದಲ್ಲಿ ಕನಕದಾಸರ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳುವರು ಎಂದು ಹೇಳಿದರು.
ಹೊನ್ನಾಳಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ ಹಾಗೂ ಮುಖಂಡ ಬಿ. ಸಿದ್ದಪ್ಪ ಮಾತನಾಡಿ, ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಈ ಕಾರ್ಯ ಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಆಯೋಜಕರು ಇಟ್ಟುಕೊಂಡಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಾವಣಗೆರೆಯ ಇಟ್ಟಿಗುಡಿ ಮಂಜುನಾಥ್ ಹೇಳಿದರು. ಈ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಜ. 4 ರಂದು ಬೆಳಿಗ್ಗೆ 9.30 ಕ್ಕೆ ದಾವಣಗೆರೆ ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಸಮೀಪ ಕಾಳಿದಾಸ ವೃತ್ತದಿಂದ ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಹೈಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ದಾವಣಗೆರೆ ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಮುಖಂಡರಾದ ಶಿವಣ್ಣ ಮಾಸ, ರಾಜು ಮೌರ್ಯ, ಲಿಂಗರಾಜ್, ಪ್ರಕಾಶ್, ಬೀರೇಶ್, ಗುಡದಪ್ಪ, ವಿನಯ್ ಕುಮಾರ್, ಹೊನ್ನಾಳಿಯ ಅರಕ್ ಸಿದ್ದಪ್ಪ, ಶಿವಯೋಗಿ, ಎಚ್.ಎ. ಉಮಾಪತಿ, ಪುರಸಭೆ ಸದಸ್ಯರಾದ ಎಂ.ಸುರೇಶ್ ಬಾಬು ಹೋಬಳದಾರ್, ಗಾಳಿ ನಾಗರಾಜ್, ರಂಜಿತ್, ಕರವೇ ಶ್ರೀನಿವಾಸ್ ಇನ್ನಿತರರಿದ್ದರು.