ಎಸ್.ಓ.ಜಿ. ಕಾಲೋನಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್
ದಾವಣಗೆರೆ, ಡಿ. 29 – ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೂ ನೀಡಬೇಕು, ನಮ್ಮದು ವೈವಿಧ್ಯ ಮಯ, ಸಾಂಸ್ಕೃತಿಕ ದೇಶ. ನಮ್ಮ ಸಂಸ್ಕೃತಿಯನ್ನು ಉಳಿಸುವ, ಕೆಲಸವನ್ನು ಯುವ ಪೀಳಿಗೆಯು ಮಾಡಬೇಕು ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಎಸ್.ಓ.ಜಿ. ಕಾಲೋನಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಕ್ಕಳು ಪಠ್ಯ, ಪಠ್ಯೇತರ ಚಟುವಟಿಕೆ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಬಾಳೆ ಗಿಡಕ್ಕೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಲಿ. ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮ ಇದ್ದಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್. ತಿಮ್ಮಣ್ಣ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಕನ್ನಡ ಭಾಷೆಯಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಮನಸ್ಥಿತಿ ಹೊಂದಿರುವುದರಿಂದ ಇಂದು ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಯುವ ಜನತೆ ಕನ್ನಡ ಸಾಹಿತ್ಯಗಳನ್ನು ಓದುವ ಮೂಲಕ ಕನ್ನಡದ ಭಾಷೆಯ ರಕ್ಷಣೆಗೆ ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ. ಕಲ್ಲೇಶಪ್ಪ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಪ್ರೀತಿಸುವಂತಾಗಬೇಕು. ಕನ್ನಡವನ್ನು ವ್ಯವಹಾರಿಕವಾಗಿ ಬಳಸಿದಾಗ ಮಾತ್ರ ಭಾಷೆಯು ಬೆಳವಣಿಗೆ ಹೊಂದಲು ಸಾಧ್ಯ. ಕನ್ನಡವು ವಿಶ್ವ ಲಿಪಿಯ ರಾಣಿಯಾಗಿದ್ದು, ವಿಜ್ಞಾನ ಭಾಷೆಯಾಗಿ ರೂಪುಗೊಂಡಿದೆ ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕಿದ್ದು ಕನ್ನಡ ಪರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸುರೇಶ್, ಸರ್ಕಾರಿ ಶಾಲೆ ಶಿಕ್ಷಕಿ ರೇಣುಕಾ, ಅಶೋಕ್, ಪುಟ್ಟಣ, ಪಾಂಡುರಂಗ, ಗಿರೀಶ್, ತಿಪ್ಪಣ್ಣ, ಶಿವಣ್ಣ, ಪರಶುರಾಮ್, ಬಸಣ್ಣ, ಪರಶುರಾಮ್, ಚನ್ನವೀರಪ್ಪ ಹಾಗೂ ಎಸ್.ಓ.ಜಿ. ಕಾಲೋನಿಯ ನಾಗರೀಕರು ಉಪಸ್ಥಿತರಿದ್ದರು.