ದಾವಣಗೆರೆ, ಡಿ. 29 – ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಮಾನಕರ ಮಾತುಗಳನ್ನಾಡಿದ ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮುಸ್ಲಿಂ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕ ಟಿ. ಅಸ್ಗರ್ ಮಾತನಾಡಿ, ಸಂಸತ್ ಭವನದಲ್ಲಿ ರಾಜ್ಯಸಭಾ ಕಲಾಪ ನಡೆಯುತ್ತಿದ್ದಾಗ ಕೇಂದ್ರ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದು, ನಮ್ಮ ಮನಸ್ಸಿಗೆ ನೋವು ಉಂಟಾಗಿದೆ. ಅಮಿತ್ ಷಾ ಹೇಳಿಕೆಯಿಂದ ಸಂವಿಧಾನವನ್ನು ಒಪ್ಪುವ ದೇಶದ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದರು.
ಅಮಿತ್ ಷಾ ಹೇಳಿಕೆ ದೇಶದ ಸ್ವಾಸ್ಥ್ಯವನ್ನು ಹಾಳು ಮಾಡುವಂತಿದೆ. ಆದ್ದರಿಂದ ಅವರನ್ನು ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಜೀರ್, ಇಬ್ರಾಹೀಂ ಖಲೀಲ್‌ವುಲ್ಲಾ, ಮುಜಾಮಿಲ್ ಜಾಫರ್, ಮಹಮ್ಮದ್ ಶೋಹೇಬ್ ಅಲಿ, ಅಲ್ತಾಫ್ ಹುಸೇನ್, ಆದಿಲ್ ಖಾನ್, ರಿಯಾಜ್ ರಜ್ವಿ, ತಾಹೀರ್, ನೂರ್ ಅಹ್ಮದ್, ರಫೀಕ್, ಹಯಾತ್, ಸುಹೀಲ್, ಖಾಜಾ ಮತ್ತಿತರರು ಭಾಗವಹಿಸಿದ್ದರು.