ದಾವಣಗೆರೆ, ಡಿ. 22 – ರೈಲು ಪ್ರಯಾಣಿಕರ ಜೀವ ಉಳಿಸುವ ಮತ್ತು ಆಸ್ತಿ ರಕ್ಷಣೆಯಲ್ಲಿ ಪ್ರಮುಖ ಸೇವೆ ಸಲ್ಲಿಸಿದ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ನೀಡುವ ಅತಿ ವಿಶಿಷ್ಟ ‘ರೈಲು ಸೇವಾ ಪುರಸ್ಕಾರ’ ದಾವಣಗೆರೆ ರೈಲ್ವೆ ರಕ್ಷಣಾ ದಳದ ಮುಖ್ಯ ಪೇದೆ ಟಿ. ಶಿವಾನಂದ ಅವರಿಗೆ ನೀಡಲಾಗಿದೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಪೇದೆ ಟಿ. ಶಿವಾನಂದ ಅವರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ‘ರೈಲು ಸೇವಾ ಪುರಸ್ಕಾರ’ ನೀಡಿ ಗೌರವಿಸಿದ್ದಾರೆ.
ರೈಲು ಪ್ರಯಾಣಿಕರ ಜೀವ ಉಳಿಸುವ ಮತ್ತು ಆಸ್ತಿ ರಕ್ಷಣೆ ಮಾಡುವ ರೈಲ್ವೆ ಉದ್ಯೋಗಿಗಳು ಮತ್ತು ಅಧಿಕಾರಿಗಳನ್ನು ‘ರೈಲು ಸೇವಾ ಪುರಸ್ಕಾರ’ಕ್ಕೆ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಆಯ್ಕೆ ಮಾಡಲಾಗುತ್ತಿದೆ. ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನ ಜೀವ ಉಳಿಸಿದ ಮುಖ್ಯಪೇದೆ ಟಿ. ಶಿವಾನಂದ ಅವರನ್ನು ದಾವಣಗೆರೆ ರೈಲ್ವೆ ರಕ್ಷಣಾ ದಳದಿಂದ ಆಯ್ಕೆ ಮಾಡಲಾಗಿತ್ತು.
2023ರ ಜುಲೈ 7 ರಂದು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 12778 ಸಂಖ್ಯೆಯ ರೈಲು ನಿಲ್ದಾಣಕ್ಕೆ ಬರುತ್ತಿದ್ದಾಗ ವೃದ್ಧನೊಬ್ಬ ಹಳಿಯ ಮೇಲೆ ಸಿಲುಕಿಕೊಂಡಿರುವುದನ್ನು ಗಮನಿಸಿದ ಆರ್ಪಿಎಫ್ ಮುಖ್ಯ ಪೇದೆ ಟಿ. ಶಿವಾನಂದ ಅವರು ತಕ್ಷಣವೇ ಟ್ರ್ಯಾಕ್ಗೆ ಹಾರಿ ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳುತ್ತಿದ್ದ ವೃದ್ಧನ ಪ್ರಾಣ ರಕ್ಷಣೆ ಮಾಡಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆಗೆ ಕಾರಣರಾಗಿದ್ದರು. ಸಮಯೋಚಿತವಾಗಿ ವೃದ್ಧನ ಪ್ರಾಣ ರಕ್ಷಿಸಿದ್ದ ಟಿ. ಶಿವಾನಂದ ಅವರನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ‘ರೈಲು ಸೇವಾ ಪುರಸ್ಕಾರ’ ಆಯ್ಕೆ ಮಾಡಲಾಗಿತ್ತು.