ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಆಗ್ರಹ

ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಆಗ್ರಹ

ನವದೆಹಲಿ, ಡಿ.20- ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರು ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆಗ್ರಹಿಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಮಂತ್ರಿ ಅಮಿತ್ ಷಾ ಅವರು ಇಡೀ ಪ್ರಪಂಚವೇ ಮೆಚ್ಚುವ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಇಡೀ ದೇಶದ ಜನತೆಗೆ ತುಂಬಾ ನೋವನ್ನುಂಟು ಮಾಡಿದ್ದಾರೆ ಎಂದು ಹೇಳಿದರು. 

ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ, ಗೌರವಿಸುತ್ತೇವೆ ಎಂದು ಹೇಳುತ್ತಾ ಬಂದಿರುವ ಅಮಿತ್ ಷಾ ಅವರು, ಅಂಬೇಡ್ಕರ್ ಬದಲು ದೇವರ ಪೂಜೆ ಮಾಡಿದರೆ ಚೆನ್ನಾಗಿತ್ತು ಎಂದು ಹೇಳುವ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸುವ ಶೋಷಿತ ಸಮುದಾಯಗಳ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳಿಗೆ ನೋವುಂಟು ಮಾಡಿದ್ದು, ಇಡೀ ಪ್ರಪಂಚದ ಜನತೆಯೇ ಕಣ್ಣಾರೆ ಕಂಡಿದೆ. ಇದನ್ನು ವಿರೋಧಿಸಿ, ಇಂಡಿಯಾ ಒಕ್ಕೂಟದ ನಾವುಗಳು ಸದನದ ಹೊರ ಭಾಗದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದುದನ್ನು ತಡೆಯಲು ಬಿಜೆಪಿ ಹುನ್ನಾರ ನಡೆಸಿತು. ಗಲಾಟೆ, ಗಲಭೆ ಸೃಷ್ಠಿಸಿ ಅಂಬೇಡ್ಕರ್ ಅವರಿಗೆ ಮಾಡಿದ ಅವಹೇಳನ ವಿಷಯವನ್ನು ಮರೆಮಾಚಲು ಮುಂದಾಯಿತು ಎಂದು ಸಂಸದರು ಕಿಡಿಕಾರಿದರು. 

ಆದಾನಿ, ಅಂಬಾನಿಗೆ ಮಾತ್ರ ಗುತ್ತಿಗೆ ನೀಡುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಷಾ‌ ಅವರಿಗೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಕಿಂಚಿತ್ತು ಗೌರವಿಲ್ಲ. ಅಂಬೇಡ್ಕರ್ ಅವರು ಈ ದೇಶದ ದಲಿತ ದಮನಿತರ ಅಲ್ಪ ಸಂಖ್ಯಾತರ ದೊಡ್ಡ ಶಕ್ತಿ. ಅಲ್ಲದೇ ವಿಶ್ವಕ್ಕೆ ಡಾ.ಬಿಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದ್ದು ಎಂದು ತಿಳಿಸಿರುವ ಸಂಸದರು, ಅಂಬೇಡ್ಕರ್  ಅವರಿಗೆ ಮಾಡಿದ ಅಪಮಾನದಿಂದ ದಲಿತರು, ಹಿಂದುಳಿದ ವರ್ಗದವರು, ಇಡೀ ದೇಶವೇ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.  ಈ ಕೂಡಲೇ ಕೇಂದ್ರದ ಗೃಹ ಮಂತ್ರಿಗಳು ಇಡೀ ದೇಶದ ಜನತೆಯ ಮುಂದೆ ಕ್ಷಮೆ ಕೇಳಬೇಕೆಂದು ಸಂಸದರು ಆಗ್ರಹಿಸಿದರು.

error: Content is protected !!