ಹರಿಹರ, ಡಿ. 18 – ನಗರದ ಹಿಂದೂ ರುದ್ರಭೂಮಿಗೆ ಹೆಚ್ಚುವರಿಯಾಗಿ ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ನಗರದ ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ವತಿಯಿಂದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ, ದಾವಣಗೆರೆ ಉಪ-ವಿಭಾಗಾಧಿಕಾರಿ ಸಂತೋಷ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಮುಖಂಡ ಕೃಷ್ಣಮೂರ್ತಿ, ಶೇಟ್, ಬೆಳ್ಳೂಡಿ ರಾಮಚಂದ್ರಪ್ಪ, ಸಿ.ಎನ್. ಹುಲುಗೇಶ್ ಮಾತನಾಡಿ, ಹಿಂದೂ ರುದ್ರಭೂಮಿ ಚಿಕ್ಕದಾಗಿದ್ದು, ಇಲ್ಲಿನ ರುದ್ರಭೂಮಿಯಲ್ಲಿ ಸುಮಾರು ಏಳು, ಎಂಟು ದಶಕಗಳಿಂದ ಅಂತ್ಯಕ್ರಿಯೆ ನಡೆಸಿಕೊಂಡು ಬರಲಾಗುತ್ತಿದೆ. ನಗರದ ಜನಸಂಖ್ಯೆ ಹಿಂದಿಗಿಂತ ಹತ್ತು ಪಟ್ಟು ಹೆಚ್ಚಾಗಿದ್ದು ಸರ್ಕಾರದ ಸುತ್ತೋಲೆ ಅನುಸಾರ 28.5.2002 ರಂತೆ ಸಾವಿರ ಜನಕ್ಕೆ 18 ರಿಂದ 20 ಗುಂಟೆಯಷ್ಟು ಸ್ಮಶಾನ ಸೌಲಭ್ಯ ಕಲ್ಪಿಸುವುದು ಸೂಕ್ತವೆಂದು ಉಲ್ಲೇಖ ಇರುತ್ತದೆ. ಆದರೆ ಹರಿಹರ ನಗರದಲ್ಲಿ 2011ನೇ ಸಾಲಿನ ಜನಗಣತಿಯಂತೆ 90,502 ಇದ್ದು, ಪ್ರಸ್ತುತ ಈಗಿನ ಜನಸಂಖ್ಯೆ 1 ಲಕ್ಷದ 20 ಸಾವಿರ ಮೀರಿದೆ. ಆದ್ದರಿಂದ ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಹಿಂದೂ ರುದ್ರಭೂಮಿ ಚಿಕ್ಕದಾಗಿ ಇರುತ್ತದೆ. ಜೊತೆಗೆ ಇಲ್ಲಿನ ಭೂಮಿ ಚಿಕ್ಕದಾಗಿ ಇರೋದರಿಂದ ಒಂದರ ಮೇಲೊಂದು ಅಂತ್ಯಕ್ರಿಯೆ ನಡೆಸುವಂತಹ ಸಂದಿಗ್ಧ ಪರಿಸ್ಥಿತಿ ಇರುತ್ತದೆ ಹಾಗೂ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಕೂಡ ಇದ್ದು, ಸರ್ಕಾರ ಈ ಕೂಡಲೇ ಹಿಂದೂ ರುದ್ರಭೂಮಿಗೆ ಹೆಚ್ಚುವರಿ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಪ್ಪ, ನಗರಸಭೆ ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಸುರೇಶ್ ರಾಜನವರ್, ಸಿದ್ದಪ್ಪ, ಗಣೇಶ ನಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಮ್ ಬಾಬು ಇತರರು ಹಾಜರಿದ್ದರು.