ದಾವಣಗೆರೆ, ಡಿ. 18- ಕಾಂತರಾಜ ವರದಿ ಜಾರಿ ಹೋರಾಟದ ಜೊತೆಯಲ್ಲೇ ಮೇಲ್ವರ್ಗದ ಜನರಿಗೆ ನೀಡಿರುವ ಮೀಸಲಾತಿ ವಿರುದ್ಧವೂ ಹೋರಾಟ ಮಾಡುವ ಅಗತ್ಯವಿದೆ ಎಂದು ಚಿಂತಕ ಶಿವಸುಂದರ್ ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತ ಜಾಗೃತ ವೇದಿಕೆಯಿಂದ ನಗರದ ರೋಟರಿ ಬಾಲಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಕುರಿತು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ ಪರ ಇದ್ದೇವೆ ಎಂದು ಬೊಗಳೆ ಬಿಡುವವರನ್ನು ಪ್ರಶ್ನೆ ಮಾಡುವ ಅವಶ್ಯ ಕತೆ ಇದೆ. ದುರ್ಬಲ ವರ್ಗದ ಜನರನ್ನು ಬಳಸಿ ಕೊಂಡು ಶಕ್ತಿಯುತವಾಗಿ ಬೆಳೆಯುತ್ತಿರುವವರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಮೀಸಲಾತಿ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಿಗಬೇಕು. ಮೀಸಲಾತಿಯಲ್ಲಿ ಸಮಾನತೆ ಕಲ್ಪಿಸುವುದಲ್ಲದೇ ಸಂಪತ್ತಿನ ಹಂಚಿಕೆಯಲ್ಲೂ ಏಕತೆ ಕಲ್ಪಿಸಬೇಕಿದೆ. ಜಾತಿ ವ್ಯವಸ್ಥೆ ನಾಶವಾಗುವವರೆಗೂ ಸಮಾನತೆ ಮೂಡುವುದಿಲ್ಲ ಎಂದು ತಿಳಿಸಿದರು.
ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ಸಂಬಂಧ, ಕಾಂತರಾಜ ಆಯೋಗದ ವರದಿ ಜಾರಿಗೂ ಮುನ್ನ ಸಾರ್ವಜನಿಕ ಚರ್ಚೆಗೆ ಬರಲಿ. ಅವಶ್ಯಕತೆ ಇದ್ದಲ್ಲಿ ಜಾರಿ ಮಾಡಲಿ, ಇಲ್ಲವೇ ಕೈಬಿಡಲಿ ಎಂದು ಹೇಳಿದರು.
ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಆದರೆ, ಚಿನ್ನಪ್ಪ ರೆಡ್ಡಿ ಆಯೋಗ ನೀಡಿದ ಶೈಕ್ಷಣಿಕ ಮತ್ತು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರದಿ ಹಿನ್ನೆಲೆಯಲ್ಲಿ ಒಬಿಸಿ ಮೀಸಲಾತಿ ನೀಡಲಾಗಿದೆ. ಧರ್ಮಾಧಾರಿತ ಮೀಸಲಾತಿ ಎಂಬುದು ಇಲ್ಲ ಎಂದು ಹೇಳಿದರು.
ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಲ್ಸಿ ಅಬ್ದುಲ್ ಜಬ್ಬಾರ್, ಕಾಂತರಾಜ ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಒಲವಿದೆ. ಆದರೆ, ಬಲಿಷ್ಠ ಸಮುದಾಯಗಳ ಒತ್ತಡವಿದೆ. ಹೀಗಾಗಿ ಜಾರಿ ತಡವಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲರೂ ಬಲ ತುಂಬಿದರೆ ವರದಿ ಅನುಷ್ಠಾನ ಕಷ್ಟವಲ್ಲ ಎಂದರು.
ನ್ಯಾಯ ಸಿಗಬೇಕಾದರೆ ನಾವು ಮೊದಲು ಜಾಗೃತ ರಾಗಬೇಕು. ದೊಡ್ಡಮಟ್ಟದಲ್ಲಿ ಸಭೆಗಳು ನಡೆಯಬೇಕು. ಅಲ್ಲದೇ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಲಾಗುವುದು ಎಂದು ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತ ಜಾಗೃತ ವೇದಿಕೆ ಅಧ್ಯಕ್ಷ ಅಬ್ದುಲ್ ಘನಿ ತಾಹೀರ್ ಮಾತನಾಡಿ, ಹಿಂದುಳಿದ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಅಧ್ಯಯನಕ್ಕೆ 168 ಕೋಟಿ ರೂ. ವೆಚ್ಚದಲ್ಲಿ ವರದಿ ಸಿದ್ಧವಾಗಿದೆ. ಆದರೆ, ಜಾರಿಗೆ ಅಡ್ಡಿಗಳು ಬರುತ್ತಿವೆ. ಹಿಂದುಳಿದ ಸಮುದಾಯಗಳ ನಿಖರ ಅಂಕಿ-ಅಂಶಗಳು ತಿಳಿಯಬೇಕಾದರೆ ಕಾಂತರಾಜ ವರದಿ ಅನುಷ್ಠಾನ ಆಗಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ನೆರಳು ಬೀಡಿ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಮುಖಂಡರಾದ ಬಿ.ಹೆಚ್. ಪರಶುರಾಮಪ್ಪ, ಎಂ. ಜಯಣ್ಣ, ವಕೀಲರಾದ ರಜ್ವಿಖಾನ್, ಅನೀಸ್ ಪಾಷಾ, ಕೆ.ಹೆಚ್. ಹನೀಫ್, ಲಿಯಾಖತ್ ಅಲಿ, ಭಾಷಾಸಾಬ್, ಅಯೂಬ್ ಖಾನ್, ಶಕೀಲ್ ಅಹ್ಮದ್, ಮೈನುದ್ದೀನ್, ಅಬ್ದುಲ್ ಸಮದ್, ಕರಿಬಸಪ್ಪ ಇತರರಿದ್ದರು.