ತರಳಬಾಳು ಹುಣ್ಣಿಮೆ : ಇಂದು ಸಭೆ

ತರಳಬಾಳು ಹುಣ್ಣಿಮೆ : ಇಂದು ಸಭೆ

ಚಿತ್ರದುರ್ಗ ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾದ ಭರಮಸಾಗರ ದಲ್ಲಿ ಫೆಬ್ರವರಿ ತಿಂಗಳಲ್ಲಿ 9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಿದ್ಧತೆ ಕೈಗೊಳ್ಳಲು ಇಂದು ಮಧ್ಯಾಹ್ನ 3 ಗಂಟೆಗೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಿರಿಗೆರೆಯ ಶ್ರೀ ಗುರುಶಾಂತ ದಾಸೋಹ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

9 ದಿನಗಳ ಕಾಲ ಸಂಭ್ರಮದ ಆಚರಣೆಯನ್ನು ಸುಗಮವಾಗಿ ಆಚರಿಸಲು ಮಹಾಮಂಟಪ ನಿರ್ಮಾಣ, ಅತಿಥಿ ಸತ್ಕಾರ, ವಸತಿ, ವಾಹನ ನಿಲುಗಡೆ, ನೀರು ಸರಬರಾಜು, ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ, ಸ್ವಚ್ಛತೆ, ಪೊಲೀಸ್ ಸಿಬ್ಬಂದಿ ವ್ಯವಸ್ಥೆ, ಜಾಹೀರಾತು, ಸ್ವಯಂಸೇವಕರ ಸಮಿತಿಗಳನ್ನು ಈ ಸಭೆಯಲ್ಲಿ ರಚಿಸಲು ಉದ್ದೇಶಿಸಲಾಗಿದೆ.

ಭರಮಸಾಗರ ಹೊರ ವಲಯದಲ್ಲಿ ಮಹೋತ್ಸವ ಆಚರಣೆಗೆ ಈಗಾಗಲೇ ಸುಮಾರು ನೂರು ಎಕರೆ ಪ್ರದೇಶದ ಜಾಗವನ್ನು ಗುರುತಿಸಲಾಗಿದೆ. ಮಂಟಪದ ವಿನ್ಯಾಸ ರಚನೆಯ ಹೊಣೆಗಾರಿಕೆಯನ್ನು ಮಠದ ರೆಸಿಡೆಂಟ್ ಎಂಜಿನಿಯರ್‌ಗಳಾದ ಸಿ. ರವಿಕುಮಾರ್, ರಾಜು ಅವರಿಗೆ ನೀಡಲಾಗಿದೆ.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ  ಇದೇ ದಿನಾಂಕ 21 ರಿಂದ ಹತ್ತು ದಿನಗಳ ಕಾಲ ಉತ್ತರ ಭಾರತದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ಸಮಿತಿಗಳನ್ನು ಈಗ ರಚಿಸಬೇಕಾಗಿರು ವುದರಿಂದ ಕಾರ್ಯಕರ್ತರು, ಅಭಿಮಾನಿಗಳು, ಮಠದ ಭಕ್ತರು ಈ ಸಭೆಗೆ ಆಗಮಿಸುವಂತೆ ಕೋರ ಲಾಗಿದೆ.

ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಎಲ್ಲಾ ಸಮುದಾಯದ ಜನರನ್ನು ಒಳಗೊಂಡ ಪ್ರಾತಿನಿಧಿಕ ಸಮಿತಿಗಳನ್ನು ರಚಿಸಲು ಚಿಂತಿಸಲಾಗಿದ್ದು, ಸಿರಿಗೆರೆಯಲ್ಲಿ ನಡೆದ ಮೊದಲ ಪೂರ್ವಭಾವಿ ಸಭೆಯಲ್ಲಿ ನೀಡಲಾಗಿದ್ದ ಮಾಹಿತಿಯನ್ನು ಈ ಸಭೆಗೆ ಬರುವಾಗ ತರಬೇಕೆಂದು ಸೂಚಿಸಲಾಗಿದೆ. 

error: Content is protected !!