ಮಲೇಬೆನ್ನೂರು, ಡಿ. 16- ಹಿಂಡಸಘಟ್ಟ ಗ್ರಾಮದ ಐತಿಹಾಸಿಕ ಪುಷ್ಕರಣಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಮತ್ತು ಕೊಕ್ಕನೂರಿನ ಶ್ರೀ ಆಂಜನೇಯ ಸ್ವಾಮಿಯ ತೆಪ್ಪೋತ್ಸವವು ಶನಿವಾರ ರಾತ್ರಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಂಪ್ರದಾಯದಂತೆ ಕೊಕ್ಕನೂರಿನ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಹಿಂಡಸಘಟ್ಟ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತಂದು, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ದೇವಸ್ಥಾನದ ಬಳಿ ಹಾಗೂ ಪುಷ್ಕರಣಿಯಲ್ಲಿ ಭಕ್ತರು ದೀಪ ಹಚ್ಚಿ ಕಾರ್ತಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಬಳಿಕ ಕೊಕ್ಕನೂರು ಆಂಜನೇಯ ಸ್ವಾಮಿ ಹಾಗೂ ಹಿಂಡಸಘಟ್ಟದ ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪುಷ್ಕರಣಿಗೆ ತಂದು ಹೂವಿನಿಂದ ಅಲಂಕಾರ ಮಾಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ದೇವರಿಗೆ ಪೂಜೆ ಸಲ್ಲಿಸಿ, ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಜೊತೆಗೆ ಶ್ರೀಗಳೂ ಸಹ ತೆಪ್ಪದಲ್ಲಿ ಕುಳಿತು ತೆಪ್ಪೋತ್ಸವ ನಡೆಸಿಕೊಟ್ಟರು.
ಪುಷ್ಕರಣಿಯಲ್ಲಿ ಸಂಚರಿಸಿದ ತೆಪ್ಪೋತ್ಸವಕ್ಕೆ ಭಕ್ತರು ಕೈ ಮುಗಿದು ಭಕ್ತಿ ಸಮರ್ಪಿಸಿದರು. ಪುಷ್ಕರಣಿಯ ಜೊತೆಗೆ ಇಡೀ ಗ್ರಾಮ ಬಣ್ಣ-ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಗಮನ ಸೆಳೆಯಿತು.
ಕೊಕ್ಕನೂರು, ಹಳ್ಳಿಹಾಳ್, ಜಿ. ಬೇವಿನಹಳ್ಳಿ, ಜಿಗಳಿ, ಕೆ.ಎನ್. ಹಳ್ಳಿ, ವಾಸನ, ನಂದಿಗುಡಿ, ಉಕ್ಕಡಗಾತ್ರಿ, ಗೋವಿನಹಾಳ್, ಮೂಗಿನಗೊಂದಿ ಮತ್ತು ಕೋಣನತಲೆ ಸೇರಿದಂತೆ ಮತ್ತಿತರೆ ಗ್ರಾಮಗಳಿಂದ ಸಾವಿರಾರು ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು.