ಜಗಳೂರು : ಡ್ರೋನ್ ಬಳಸಿ ಔಷಧಿ ಸಿಂಪಡಿಸಿದರೆ ಉತ್ಪಾದನಾ ವೆಚ್ಚ ಕಡಿಮೆ

ಜಗಳೂರು : ಡ್ರೋನ್ ಬಳಸಿ ಔಷಧಿ ಸಿಂಪಡಿಸಿದರೆ ಉತ್ಪಾದನಾ ವೆಚ್ಚ ಕಡಿಮೆ

ಕಡಲೆ ಬೆಳೆಗೆ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆಯಲ್ಲಿ ಬೇಸಾಯ ತಜ್ಞ ಡಾ.ಬಿ.ಓ. ಮಲ್ಲಿಕಾರ್ಜುನ್

ಜಗಳೂರು, ಡಿ.16- ತಾಲ್ಲೂಕಿನಲ್ಲಿ ಪ್ರಸ್ತುತ ಸಾಲಿನಲ್ಲಿ 6,900 ಹೆಕ್ಟೇರ್‌ ಕಡಲೆ ಬೆಳೆಯ ವಿಸ್ತೀರ್ಣವಿದ್ದು, ಇದಕ್ಕೆ ಡ್ರೋನ್‌ ಮೂಲಕ ಔಷಧ ಸಿಂಪಡಣೆ ಮಾಡಿದರೆ ಸಮಯ ಮತ್ತು ನೀರಿನ ಉಳಿತಾಯ ಮಾಡುವ ಜತೆಗೆ ಕಡಿಮೆ ಶ್ರಮ ವಿನಿಯೋಗಿಸಬಹುದು ಎಂದು ಟಿ.ಕೆ.ವಿ.ಕೆ ಬೇಸಾಯ ತಜ್ಞ ಡಾ.ಬಿ.ಓ. ಮಲ್ಲಿಕಾರ್ಜುನ್ ರೈತರಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಅತೀ ಹೆಚ್ಚು ಕಡಲೆ ಬೆಳೆಯುವ ಕಲ್ಲೇದೇವರಪುರ ಗ್ರಾ.ಪಂ ನಲ್ಲಿ  ಕೆವಿಕೆ ಮತ್ತು ಬಿದರಕೆರೆ ತರಳಬಾಳು ಎಫ್‍ಪಿಒ ಸಂಯುಕ್ತಾಶ್ರಯದಲ್ಲಿ ಡ್ರೋಣ್ ಮೂಲಕ ಉಚಿತವಾಗಿ 62 ಎಕರೆ ಕಡಲೆ ಬೆಳೆಗೆ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂಗಾರಿನ ಪ್ರಮುಖ ದ್ವಿದಳ ಧಾನ್ಯದ ಬೆಳೆ ಕಡಲೆಯಾಗಿದೆ. ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೃಷಿಯಲ್ಲಿ ಡ್ರೋನ್ ಬಳಸಿ, ಔಷಧಿ ಸಿಂಪಡಣೆ ಮಾಡುವುದರಿಂದ ನಿಖರತೆ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ರೈತರಿಗೆ ಮನವರಿಕೆ ಮಾಡಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಈ ವರ್ಷ ಈರುಳ್ಳಿಗೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಮಳೆಯಿಂದ ಈರುಳ್ಳಿ ಬೆಳೆಗಾರರಿಗೆ ಆರ್ಥಿಕ ನಷ್ಟವಾಗಿದೆ. 

ಹಾಗೆಯೇ ಉತ್ಪಾದನೆಯಲ್ಲೂ ಸಹ ಏರಿಳಿತ ಕಂಡಿದ್ದು, ಬೆಲೆಯೂ ಏರು ಮುಖದತ್ತ ಸಾಗಿದೆ. ಎಂದ ಅವರು, ಈ ವರ್ಷ ಕೇಂದ್ರದಿಂದ ಸೂಕ್ತ ತಳಿಯ ಬಗ್ಗೆ ನಿರ್ಧರಿಸಲು ಈರುಳ್ಳಿಯಲ್ಲಿ ವಿವಿಧ ತಳಿಗಳ ತಂತ್ರಜ್ಞಾನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಆರ್ಕಾ ಭೀಮ್, ಭೀಮಾ ರೆಡ್ ಮತ್ತು ಅಗ್ರಿ ಫೌಂಡ್ ಲೈನ್ ರೆಡ್ ಮೊದಲಾದ ತಳಿಗಳನ್ನು ಪ್ರಯೋಗದಲ್ಲಿ ಬಳಸುತ್ತಿದ್ದು, ಹಿಂಗಾರಿಗೆ ಸೂಕ್ತ ತಳಿಯನ್ನು ನಿರ್ಧರಿಸಲಾಗಿದೆ. 

ಕೃಷಿಯಲ್ಲಿ ನವೀನ ತಾಂತ್ರಿಕತೆ ಬಳಸಿಕೊಂಡರೆ ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಂಪನಿ ನಿರ್ದೇಶಕ ಬಸಪ್ಪನಹಟ್ಟಿ ಕೃಷ್ಣಮೂರ್ತಿ, ಪ್ರಗತಿಪರ ಕೃಷಿಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!