ಜಗಳೂರಿನಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರಿಂದ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ
ದಾವಣಗೆರೆ, ಡಿ. 17 – ಜಗಳೂರಿನಲ್ಲಿ ಕೆಎಸ್‌ಆ ರ್‌ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಗತಿ ಪರ ಸಂಘಟನೆಗಳು ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಜಗಳೂರಿನಿಂದ ಸೋಮವಾರ ಪಾದಯಾತ್ರೆ ಮೂಲಕ ಹೊರಟ ಪ್ರತಿಭಟನಾಕಾರರು ದೇವಿಕೆರೆ, ಬಿಳಿಚೋಡು, ಅಣಜಿ, ಮೆಳ್ಳೇಕಟ್ಟೆ, ಎಲೆಬೇತೂರು ಮುಖಾಂತರ ದಾವಣಗೆರೆ ನಗರದ ಅರಳಿಮರ ವೃತ್ತ, ಗಾಂಧಿ ವೃತ್ತದ ಮೂಲಕ ಸರ್ಕಾರಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಕೆಎಸ್ ಆರ್‌ಟಿಸಿ ಡಿಪೋ ಮುಂಭಾಗ ಜಮಾಯಿಸಿದರು.
ಪ್ರಗತಿಪರ ಹೋರಾಟಗಾರ, ವಕೀಲ ಆರ್. ಓಬಳೇಶ್ ಮಾತನಾಡಿ, ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸ್ಥಾಪಿಸಲು ಒತ್ತಾಯಿಸಿ ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ, ಕೇವಲ ಪಟ್ಟಣದ 51 ಸರ್ವೇ ನಂಬರ್‌ನಲ್ಲಿ ಜಾಗ ನಿಗದಿ ಮಾಡುವ ಮೂಲಕ ಪ್ರಸ್ತಾವನೆಗೆ ಸೀಮಿತವಾಗಿದೆ. ಕೂಡಲೇ ಸರ್ಕಾರಿ ಬಸ್ ಡಿಪೋ ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ. ಹೊಳೆ ಮಾತನಾಡಿ, ಕಳೆದ ಆಡಳಿತ ಸರ್ಕಾರಗಳು ಜಗಳೂರಿನಲ್ಲಿ ಬಸ್ ಡಿಪೋ ಸ್ಥಾಪನೆ, ಶಂಕು ಸ್ಥಾಪನೆಗೆ ದಿನಾಂಕ ನಿಗದಿಗೊಳಿಸಿ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಂತರ ಕಾರ್ಯಕ್ರಮ ರದ್ದುಪಡಿಸಿದ್ದರು. ಇಂದಿನ ಪಾದ ಯಾತ್ರೆ ಹೋರಾಟ ಅಧಿವೇಶನದಲ್ಲಿ ಧ್ವನಿಯಾಗಬೇಕು. ಸಚಿವರು, ಶಾಸಕರು ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಎಐವೈಎಫ್ ಮುಖಂಡ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ಬರಪೀಡಿತ ತಾಲ್ಲೂಕಿನ ಬಗ್ಗೆ ಜಿಲ್ಲೆಯ ಅಧಿಕಾರಿಗಳ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರಿ ಬಸ್ ಸಾರಿಗೆ ಸೇವೆಯಿಂದ ವಂಚಿತರಾಗಿದ್ದಾರೆ.ಸರ್ಕಾರಿ ಬಸ್ ಡಿಪೋವಿಲ್ಲದೆ ಸರ್ಕಾರದ ಮಹತ್ತರ ಯೋಜನೆ, ಶಕ್ತಿ ಯೋಜನೆ, ಗ್ರಾಮೀಣ ಭಾಗದ ಮಹಿಳೆಯರಿಗೆ ಮರೀಚಿಕೆಯಾಗಿವೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಆಟೋ, ಗೂಡ್ಸ್ ವಾಹನಗಳಲ್ಲಿ ಜೀವ ಕೈಯಲ್ಲಿ ಹಿಡಿದು ಶಾಲಾ – ಕಾಲೇಜುಗಳಿಗೆ ಬರುವುದಲ್ಲದೆ. ಸಮಯಕ್ಕೆ ಸರಿಯಾಗಿ ಬರದೇ ಪಾಠ ಪ್ರವಚನಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸ್ ಬಿಡುವ ಭರವಸೆ : ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಸಿದ್ದೇಶ್ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಬೇಡಿಕೆಯಂತೆ ಡಿಪೋ ಸ್ಥಾಪನೆಗೆ ಕೇಂದ್ರ ಕಛೇರಿಗೆ ಮನವಿ ರವಾನಿಸಲಾಗುವುದು. 9 ಮಾರ್ಗಗಳಲ್ಲಿ ಬಸ್ ಬಿಡಲು ಸಮೀಕ್ಷೆ ನಡೆಸಿ ಹಂತ ಹಂತವಾಗಿ ಬಿಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ಧನ್ಯಕುಮಾರ್ ಎಚ್.ಎಂ. ಹೊಳೆ, ಸತೀಶ್ ಮಲೆಮಾಚಿಕೆರೆ, ಅನಂತಮೂರ್ತಿ, ವಕೀಲ ಅಂಜಿನಪ್ಪ, ಶಿವಕುಮಾರ್, ಕುಮಾರ್ ಭರಮ ಸಮುದ್ರ, ಜೀವನ್, ಇಂದಿರಾ, ಪಲ್ಲಾಗಟ್ಟೆ ಸುಧಾ, ಶಶಿಕಲಾ, ಚಿರಂಜೀವಿ, ಹಫೀಜ್ ಉಲ್ಲಾ, ಸೂರಜ್ಜ, ಗೌರಿಪುರ ಸತ್ಯಮೂರ್ತಿ, ದೊಣೆಹಳ್ಳಿ ತಿಪ್ಪೇಸ್ವಾಮಿ, ಗುಮ್ಮನೂರು ಬಸವರಾಜ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್, ಓಬಣ್ಣ, ಚೌಡಮ್ಮ, ಹನುಮಂತಪ್ಪ, ಸೇರಿದಂತೆ ವಿವಿಧ ಸಂಘಟನೆ ಗಳ ಮುಖಂಡರು ಭಾಗವಹಿಸಿದ್ದರು.