ಪ್ರತಿಯೊಬ್ಬರೂ ಕರ್ನಾಟಕದ ಗತವೈಭವದ ಇತಿಹಾಸವನ್ನು ಅರಿಯುವ ಅವಶ್ಯಕತೆ ಇದೆ

ಪ್ರತಿಯೊಬ್ಬರೂ ಕರ್ನಾಟಕದ ಗತವೈಭವದ ಇತಿಹಾಸವನ್ನು ಅರಿಯುವ ಅವಶ್ಯಕತೆ ಇದೆ

ಜೈನ್ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕಸಾಪ ಅಧ್ಯಕ್ಷ ಬಿ .ವಾಮದೇವಪ್ಪ

ದಾವಣಗೆರೆ, ಡಿ.18- ನಗರದ ಜೈನ್ ಪದವಿ ಕಾಲೇಜು ಮತ್ತು ಜೈನ್ ಕಾಲೇಜ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಅಂಡ್ ಮ್ಯಾನೇಜ್ಮೆಂಟ್  ಕಾಲೇಜಿನ ಸಭಾಂಗಣದಲ್ಲಿ ಅದ್ಧೂರಿಯಾಗಿ 69 ನೇ ಕನ್ನಡ ರಾಜ್ಯೋತ್ಸವವನ್ನು `ತಿರುಳ್ಗನ್ನಡದ ಬೆಳ್ನುಡಿಯ ಹಬ್ಬ’ ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ  ಮಾತನಾಡಿ,  ಕನ್ನಡ-ಕನ್ನಡಿಗ ಹಾಗೂ ಕರ್ನಾಟಕದ ಭವ್ಯ  ಪರಂಪರೆಯ ಗತಕಾಲದ ಇತಿಹಾಸವನ್ನು  ಪ್ರತಿಯೊಬ್ಬ ಕನ್ನಡಿಗರು ಅರಿಯುವ ಅವಶ್ಯಕತೆ ಇದೆ ಎಂದು ಬಹಳ ಸೋದಾಹರಣವಾಗಿ ವಿವರಿಸಿ, ಕನ್ನಡ ಭಾಷೆ ಮತ್ತು ಕನ್ನಡದ ಬದುಕು ಎಷ್ಟು ಬೆಲೆಯುತವಾದದ್ದು ಎಂಬುದನ್ನು ಹಲವು ಉಲ್ಲೇಖಗಳೊಂದಿಗೆ ವಿವರಿಸಿ, ಕೇಳುಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕನ್ನಡ ಕಲಿಕೆ ಮತ್ತು ಕನ್ನಡದ ಅಸ್ಮಿತೆಯ ಕುರಿತಾದ ಗುರುತರ ಜವಾಬ್ದಾರಿಯನ್ನು ಮೂಡಿಸಿದರು.  

ಕನ್ನಡ ಪ್ರಾಧ್ಯಾಪಕ ಮಾರುತಿ ಶಾಲೆಮನೆ ಅವರು ಮಾತನಾಡಿ, ಕನ್ನಡ ಕೇವಲ ಒಂದು ಭಾಷೆಯಾಗಿರದೆ, ಅದೊಂದು ಬದುಕಿನ ಸಾರ್ಥಕದ ಕೈಗನ್ನಡಿ ಎಂದು ಹೇಳಿದರು 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇ ಜಿನ ಪ್ರಾಂಶುಪಾಲ ಮಧು ಜಿ.ಎಸ್. ಅವರು ಕರ್ನಾಟಕದ ಗತ ವೈಭವದ ರಸನಿಮಿಷಗಳನ್ನು ಮೆಲುಕು ಹಾಕಿ ಇಂದಿನ ಯುವ ಪೀಳಿಗೆಗೆ ಬೇಕಾದ ಸಂಸ್ಕಾರವು ಕನ್ನಡ ಸಂಸ್ಕೃತಿಯಲ್ಲಿರುವ ಕುರಿತು ಜಾಗೃತಿಯನ್ನುಂಟು ಮಾಡಿದರು. ಕ.ರ.ವೇ. ಯುವ ಘಟಕದ ಜಿಲ್ಲಾಧ್ಯಕ್ಷ ದೇವರ ಮನೆ ಗೋಪಾಲ್‌ ಅವರನ್ನು ಸನ್ಮಾನಿಸಲಾಯಿತು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ,  ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ ಅವರುಗಳು ಹಾಗೂ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ತೇಜ್ ಕುಮಾರ್ ಅವರು ನಾಡ ಹಬ್ಬ ಕುರಿತು ಮಾತನಾಡಿದರು.

ಕಾರ್ಯಕ್ರಮವನ್ನು ಉಪನ್ಯಾಸಕರಾದ ಕಾವ್ಯ ಅವರು ನಿರೂಪಿಸಿದರೆ, ವಿದ್ಯಾರ್ಥಿನಿ ಹೇಮಶ್ರೀ ಅತಿಥಿ ಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿದರೆ, ವಿದ್ಯಾರ್ಥಿನಿ ಪವಿತ್ರ  ವಂದಿಸಿದರು. ವಿದ್ಯಾರ್ಥಿ ವಿಜಯ್, ವಿದ್ಯಾರ್ಥಿನಿ ಗಾನವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!