ಮಾಲಾಧಾರಣೆ ಅಧರ್ಮದ ವಿರುದ್ಧ ಹೋರಾಡುವ ನಿರಂತರ ಪ್ರಕ್ರಿಯೆಯಾಗಬೇಕು

ಮಾಲಾಧಾರಣೆ ಅಧರ್ಮದ ವಿರುದ್ಧ ಹೋರಾಡುವ ನಿರಂತರ ಪ್ರಕ್ರಿಯೆಯಾಗಬೇಕು

ಹರಪನಹಳ್ಳಿ, ಡಿ. 16 – ಮಾಲಾಧಾರಣೆ ಎರಡು ದಿನಗಳ ಕಾಯಕವಾಗದೇ ಅಧರ್ಮದ ವಿರುದ್ಧ ಹೋರಾಡುವ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವೈ.ಡಿ. ಅಣ್ಣಪ್ಪ  ಹೇಳಿದರು.

ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹನುಮ ಮಾಲಾ ಸೇವಾ ಸಮಿತಿಯು ಆಯೋಜಿಸಿದ್ದ ಐದನೇ ವರ್ಷದ ಹನುಮ ಮಾಲಾಧಾರಿಗಳ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಲಾಧಾರಿಗಳು ಹಿಂದೂ ಧರ್ಮದ ರಕ್ಷಣೆ ಗಾಗಿ ಹನುಮ ಮಾಲೆ ಧರಿಸಬೇಕೇ ಹೊರತು, ವೈಯಕ್ತಿಕ ದೈವಭಕ್ತಿಗಾಗಿ ಅಲ್ಲ. ಆಂಜನೇಯ ಆದಿ ಪುರುಷ, ಧರ್ಮ ರಕ್ಷಕ, ದುಷ್ಟ ಸಂಹಾರಕ, ದೈವ ಪ್ರತೀಕ. ಮಾಲಾಧಾರಿಗಳು ಆಂಜನೇಯನನ್ನು ಸ್ಮರಿಸುವ ಜೊತೆಗೆ ಅವರ ಗುಣಗಳನ್ನು ರೂಢಿಸಿಕೊಳ್ಳ ಬೇಕು. ಈ ಮೂಲಕ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಧರ್ಮದ ಘಟನೆಗಳ ಅಂತ್ಯ ಕ್ಕಾಗಿ ಹೋರಾಟ ನಡೆಸಬೇಕು. ವರ್ಷದಿಂದ ವರ್ಷಕ್ಕೆ ಹನುಮ ಮಾಲಾ ಧಾರಿಗಳ ಸಂಖ್ಯೆ ಹೆಚ್ಚುತ್ತಿದ್ದು ಅಂಜನಾದ್ರಿಯಾ ಪುಣ್ಯಕ್ಷೇತ್ರದ ಸೇವೆಯನ್ನು ಪಡೆದು ಎಲ್ಲಾ ಮಾಲಾಧಾರಿ ವ್ರತವನ್ನು ಪೂರ್ಣಗೊಳಿಸಿ ಎಲ್ಲರೂ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ   ಹನುಮ ಮಾಲಾಧಾರಿ ಸಂಘದ ತಾಲ್ಲೂಕು ಅಧ್ಯಕ್ಷ ಪಿ. ಹಾಲೇಶ್, ಉಪಾಧ್ಯಕ್ಷ ಮೇಗಳಪೇಟೆ ವೀರೇಶ್, ಮಾಲಾಧಾರಿ ರೇವಣಸಿದ್ದಪ್ಪ, ಚಿಕ್ಕೇರಿ ಬಸಪ್ಪ, ಮ್ಯಾಕಿ ಹನುಮಂತ, ಮಾಲಾಧಾರಿ ಸ್ವಾಮಿಗಳಾದ ಮ್ಯಾಕಿ ತಿರುಪತಿ, ಜೆ. ಪರಶುರಾಮ್, ಕರಿಬಸಪ್ಪ ,ಸಂತೋಷ್, ಕಾರ್ತಿಕ್, ಚೌಡಪ್ಪ, ಜಂಗ್ಲಿ ಬಸವರಾಜ್, ಮ್ಯಾಕಿ ಗುರುವಪ್ಪ ಸೇರಿದಂತೆ, ಇತರರು ಇದ್ದರು.

error: Content is protected !!