ಮಾ.ಸ.ಬ ಕಾಲೇಜಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ಬಾತಿ ಬಸವರಾಜ್
ದಾವಣಗೆರೆ, ನ.16- ಮೂಲ ದ್ರಾವಿಡ ಭಾಷೆಯಲ್ಲಿ ಹುಟ್ಟಿದ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಪರಂಪರೆ ಇದೆ ಎಂದು ದವನ್ ಕಾಲೇಜ್ ಶೈಕ್ಷಣಿಕ ಸಲಹೆಗಾರ ಪ್ರೊ. ಬಾತಿ ಬಸವರಾಜ್ ಹೇಳಿದರು.
ನಗರದ ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ 69ನೇ ಕರ್ನಾಟಕ ರಾಜ್ಯೋ ತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತ ನಾಡಿದರು.
ಆ ಕಾಲದ ಲಿಪಿ, ಶಾಸನ ಮತ್ತು ಅನ್ಯ ಭಾಷೆ ದಾಖಲೆಗಳಿಂದ ಇದು ಸ್ಪಷ್ಟವಾಗುತ್ತದೆ. ಕನ್ನಡ ಭಾಷೆಯ ಇತಿಹಾಸವು ಜನ ಮೂಲ ಸಂಸ್ಕೃತಿ ಯನ್ನು ರೂಢಿಸಿಕೊಂಡು ವಿಶಾಲ ಹೃದಯ ವ್ಯಾಪ್ತಿಯನ್ನು ಹೊಂದಿದೆ. ರಾಮಾಯಣ ಮಹಾ ಭಾರತ ಕೃತಿಗಳಲ್ಲಿ ಆ ಕಾಲದ ಸ್ಥಳೀಯ ಜನ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಸಿ ನೀಲಾಂಬಿಕ ಅವರು ಮಾತನಾಡುತ್ತಾ, ಕನ್ನಡ ಭಾಷೆ ಎಂದರೆ ನುಡಿ ಬೆಡಗು, ಅದು ಸೊಬಗಿನ ಸೋನೆ, ಬೆಳಕಿನ ಖಜಾನೆ, ಅಲ್ಲಮನ ಶೈಲಿಯಲ್ಲಿ ಜ್ಯೋತಿರ್ಲಿಂಗ, ಬಸವಣ್ಣರ ದೃಷ್ಟಿಯಲ್ಲಿ ಮುತ್ತಿನ ಹಾರ ಚುಂಬಕ ಶಕ್ತಿ, ಹೀಗಾಗಿ ಪ್ರತಿಯೊಬ್ಬ ಕನ್ನಡಿಗರ ರಕ್ತದಲ್ಲಿ, ಹೃದಯದಲ್ಲಿ ಕನ್ನಡವೇ ಬೆರೆಯಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ
ಡಾ. ಮಂಜುನಾಥ್ ಮಾತನಾಡಿ, ಕನ್ನಡ ಎನ್ನುವುದು ಬರೀ ನುಡಿಯಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಭಾಷೆಯಾಗಿದೆ ಎಂದರು. ಗಾಯಕ ಚೇತನ್ ಕುಮಾರ್ ಅವರು ಕನ್ನಡ ಗೀತೆಗಳನ್ನು ಹಾಡಿದರು. ಉಪನ್ಯಾಸಕಿ ಶೈಲಾ ಎನ್. ಶೆಟ್ಟಿ ನಿರೂಪಿಸಿದರು, ಈಶ್ವರ್ ಕೆ. ವೈ ವಂದಿಸಿದರು. ಚೇತನ್ ಕುಮಾರ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರೊ. ರಂಗಸ್ವಾಮಿ ಟಿ. ಆರ್, ಡಾ. ವಿಜಯಕುಮಾರ್ ಎ.ಬಿ, ಡಾ.ಪ್ರವೀಣ್ ಕುಮಾರ್ ಹಾಗೂ ಇತರರು ಹಾಜರಿದ್ದರು