ಹೊನ್ನಾಳಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಡಿ. 15- ಬೆಳಗಾವಿ ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೊ ಳಿಸುವ ಬಗ್ಗೆ ಚರ್ಚೆ ಆದಲ್ಲಿ ನನ್ನ ಎರಡೂ ಕೈಎತ್ತಿ ವಿಷಯ ಮಂಡಿಸಿ, ಒಳಮೀಸಲಾತಿಗೆ ಒತ್ತಾಯಿಸುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲ್ಲೂಕಿನ ಗೊಲ್ಲರಹಳ್ಳಿಯ ತಮ್ಮ ನಿವಾಸದ ಎದುರು ಮಾದಿಗ ಹಾಗೂ ಉಪಜಾತಿಗಳ ಸಂಘಟನೆಗಳು ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ಸದನದಲ್ಲಿ ಶಾಸಕರು ಮಾತನಾಡುವಂತೆ ಒತ್ತಾಯಿಸಿ, ತಮಟೆ ಚಳವಳಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕುಂದೂರು ಶಾಂತರಾಜ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಳಮೀಸಲಾತಿ ಶಿಫಾರಸ್ಸು ಮಾಡಲು ನಿರ್ಧರಿಸಿತ್ತು, ಅಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಬೆಂಬಲಿಸಿದ್ದರು. ಈವರೆಗೂ ನೆನೆಗುದಿಗೆ ಬಿದ್ದಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಿಡಗೂರು ತಮಣ್ಣ ಮಾತನಾಡಿ, ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿಗೆ ಆಯಾ ರಾಜ್ಯಕ್ಕೆ ಆದ್ಯತೆ ನೀಡಿ 4 ತಿಂಗಳುಗಳಾಗಿದ್ದು, ಸರ್ಕಾರವು ಆಯೋಗ ರಚಿಸಿ ಕೈ ಚೆಲ್ಲಿದೆ, ಹರಿಯಾಣ, ತೆಲಂಗಾಣ ರಾಜ್ಯಗಳಂತೆ ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಸೊರಟೂರು ಹನುಮಂತಪ್ಪ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರದಲ್ಲೇ ಒಳಮೀಸಲಾತಿ ಜಾರಿಗೊಳಿಸುತ್ತೇವೆಂದು ಭರವಸೆ ನೀಡಿತ್ತು. ಶಾಸಕರು ಈ ಬಗ್ಗೆ ಅಧಿವೇಶನದಲ್ಲೀ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಮಾರಿಕೊಪ್ಪ ಮಂಜಪ್ಪ, ಬೇಲಿಮಲ್ಲೂರು ಉಮೇಶ, ನ್ಯಾಮತಿ ಸುರೇಶ್, ಸೊಗಿಲು ಸಂತೋಷ, ಮಂಜು, ನರಸಿಂಹ, ಕುಂದೂರು ಧರ್ಮಪ್ಪ , ಹನುಮಂತ, ಮಂಜುನಾಥ, ರಾಜಪ್ಪ, ಮಾದಪ್ಪ ಇನ್ನಿತರರಿದ್ದರು.