ಜಗಳೂರಿನ ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ.
ಜಗಳೂರು, ಡಿ. 15 – ಪ್ರಾಕೃತಿಕ ವಿಕೋಪದಿಂದ ಈ ವರ್ಷ ಈರುಳ್ಳಿ ಬೆಳೆಯ ಬೆಲೆ ಹೆಚ್ಚುವ ಸಾಧ್ಯತೆಯಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ಕಲ್ಲೇದೇವರಪುರ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಮ್ಮಿಕೊಂಡ ಈರುಳ್ಳಿ ಬೆಳೆಯ ಕ್ಷೇತ್ರ ಪ್ರಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷ ಅತೀ ಹೆಚ್ಚು ಮಳೆಯಿಂದ ಈರುಳ್ಳಿ ಬೆಳೆಗಾರರಿಗೆ ಆರ್ಥಿಕ ನಷ್ಟವಾಗಿದೆ. ಹಾಗೆಯೇ ಉತ್ಪಾದನೆಯೂ ಸಹ ಏರಿಳಿತ ಕಂಡಿದ್ದು, ಬೆಲೆಯು ಏರುಮುಖದತ್ತ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಹಿಂಗಾರಿನಲ್ಲಿ ಬೆಳೆಯಲು ಸೂಕ್ತ ತಳಿಗಳ ಕೊರತೆಯಿದೆ. ಹಾಗಾಗಿ ಈ ವರ್ಷ ಕೇಂದ್ರದಿಂದ ಸೂಕ್ತ ತಳಿಯ ಬಗ್ಗೆ ನಿರ್ಧರಿಸಲು ಈರುಳ್ಳಿಯಲ್ಲಿ ವಿವಿಧ ತಳಿಗಳ ತಂತ್ರಜ್ಞಾನ ತುಲನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿವಿಧ ತಳಿಗಳಾದ ಅರ್ಕಾ ಭೀಮ್, ಭೀಮಾ ರೆಡ್ ಮತ್ತು ಅಗ್ರಿಫೌಂಡ್ ಲೈಟ್ ರೆಡ್ ತಳಿಗಳನ್ನು ಪ್ರಯೋಗದಲ್ಲಿ ಬಳಸುತ್ತಿದ್ದು, ಹಿಂಗಾರಿಗೆ ಸೂಕ್ತ ತಳಿಯನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. ಮಣ್ಣು ಪರೀಕ್ಷೆಯ ಮಹತ್ವ ಮತ್ತು ಪೋಷಕಾಂಶಗಳ ನಿರ್ವಹಣೆಯ ಕುರಿತು ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೈತರಾದ ಕೃಷ್ಣಮೂರ್ತಿ, ಶಶಿಧರ, ಮೇಘನಾಥ್, ಸೂರಯ್ಯ, ದಿವಾಕರ್ ಇತರರು ಹಾಜರಿದ್ದರು.