ಮಲೇಬೆನ್ನೂರು, ಡಿ.13- ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ 23ನೇ ವಾರ್ಡಿನ ಜೆಡಿಎಸ್ ಸದಸ್ಯ ಟಿ. ಹನುಮಂತಪ್ಪ ಅವರು ಶುಕ್ರವಾರ ನಡೆದ ಚುನಾವಣಾ ಸಭೆಯಲ್ಲಿ ನಿರೀಕ್ಷೆಯಂತೆ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಎಸ್ಟಿ ಮೀಸಲಾತಿಯ ಸದಸ್ಯರಿಲ್ಲದ ಕಾರಣ 3 ಜನ ಸದಸ್ಯರನ್ನು ಹೊಂದಿದ ಜೆಡಿಎಸ್‌ಗೆ ಬಹಳ ಸುಲಭವಾಗಿ ಅಧಿಕಾರ ಸಿಕ್ಕಿತು. ಗುರುವಾರ ಕೋರಂ ಕೊರತೆಯಿಂದಾಗಿ ಚುನಾವಣೆಯನ್ನು ಒಂದು ದಿನ ಮುಂದೂಡಿದ್ದ ಚುನಾವಣಾಧಿಕಾರಿ ಯಾದ ತಹಶೀಲ್ದಾರ್ ಗುರುಬಸವರಾಜ್ ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮತ್ತೆ ಸಭೆ ಕರೆದಿದ್ದರು.
ಸಭೆಯಲ್ಲಿ ಜೆಡಿಎಸ್‌ನ 3 ಹಾಗೂ ಬಿಜೆಪಿಯ 3 ಮತ್ತು ಕಾಂಗ್ರೆಸ್‌ನ 17 ಸದಸ್ಯರ ಪೈಕಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್ ಸೇರಿ 9 ಜನ ಸದಸ್ಯರು ಹಾಜರಿದ್ದು, ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದರು. ಆಗ ಸಭೆ ನಡೆಸಲು ಕೋರಂ ಆಯಿತು. ಚುನಾವಣಾಧಿಕಾರಿಗಳು ಸಭೆಯ ವಿಷಯ ತಿಳಿಸಿ, ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾ ರೆಂದು ಪ್ರಕಟಿಸಿದರು.ಆಗ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರ ನಡೆದರು.
ಬಳಿಕ ನೂತನ ಅಧ್ಯಕ್ಷ ಹನುಮಂತಪ್ಪ ಅವರನ್ನು ಚುನಾವಣಾಧಿಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ವಾಗತಿಸಿ, ಅಭಿನಂದಿಸಿದರು. ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಉಪತಹಶೀಲ್ದಾರ್ ಆರ್. ರವಿ ಮತ್ತು ಪುರಸಭೆ ಅಧಿಕಾರಿಗಳು ಹಾಜರಿದ್ದು, ಚುನಾವಣಾ ಸಭೆಗೆ ಸಹಕರಿಸಿದರು.
ವಿಜಯೋತ್ಸವ : ಪುರಸಭೆ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಅವರು ಕೌನ್ಸಿಲ್ ಸಭಾಂಗಣದಿಂದ ಕೆಳಗಡೆ ಬರುತ್ತಿದ್ದಂತೆಯೇ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾದ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವಿರೇಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್, ಯುಸೂಫ್, ಬಾಷಾ, ಕೆ.ಜಿ. ಮಂಜುನಾಥ್, ಪಿ. ಮಹಾಲಿಂಗಪ್ಪ, ಪಾನಿಪೂರಿ ರಂಗನಾಥ್, ಎಂ.ಆರ್. ಮಹಾದೇವಪ್ಪ, ಹೊಸಳ್ಳಿ ಕರಿಬಸಪ್ಪ, ಅಯೂಬ್ ಖಾನ್, ಶಫೀ, ಕಲ್ಲಯ್ಯ, ಬೆಣ್ಣೆಹಳ್ಳಿ ಬಸವರಾಜಪ್ಪ, ಜಿಗಳಿ ಹನುಮಗೌಡ, ಭೋವಿ ಮಂಜಣ್ಣ, ಮತ್ತಿತರರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.