ಧರ್ಮದಿಂದ ಮನುಷ್ಯ ವಿಮುಖನಾದರೆ ಅವನತಿ ನಿಶ್ಚಿತ

ಧರ್ಮದಿಂದ ಮನುಷ್ಯ ವಿಮುಖನಾದರೆ ಅವನತಿ ನಿಶ್ಚಿತ

ಹರಪನಹಳ್ಳಿಯ ಶ್ರೀ ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ 9ನೇ ವಾರ್ಷಿಕೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು 

ಹರಪನಹಳ್ಳಿ, ಡಿ.13 – ಅಂತರಂಗ ಬಹಿರಂಗ ಶುದ್ಧಗೊಳಿಸುವ ಶಕ್ತಿ ಗುರುವಿಗಿದೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿ. ಧರ್ಮ ಪರಿಪಾಲನೆಯಿಂದ ಮನುಷ್ಯ ವಿಮುಖನಾದರೆ ಜೀವನದಲ್ಲಿ ಅವನತಿ ತಪ್ಪಿದ್ದಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ನಗರದ ತೆಗ್ಗಿನ ಮಠ ಸಂಸ್ಥಾನದಲ್ಲಿ ಲಿಂ.ಚಂದ್ರಮೌಳೀಶ್ವರ ಶ್ರೀಗಳ 10ನೇ ವರುಷದ ಪುಣ್ಯ ಸ್ಮರಣೋತ್ಸವ ಹಾಗೂ ಇಂದಿನ ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ 9ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ   ಧರ್ಮ ಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಉರಿಯುವ ಜ್ಯೋತಿ ತನಗಾಗಿ ಉರಿಯುವು ದಿಲ್ಲ. ಜಗಕೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಶ್ರೀ ಗುರು ಸಹ ಭಕ್ತರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಾನೆ. ವರ್ತಮಾನ, ಭವಿಷ್ಯತ್ತುಗಳಿಗೆ ಇತಿಹಾಸದ ಅರಿವು ಇರಬೇಕೆಂಬುದು ಲಿಂ.ಚಂದ್ರಮೌಳೀಶ್ವರ ಶ್ರೀಗಳವರ ಆಶಯವಾಗಿತ್ತು. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕಾರ ಸಂಸ್ಕೃತಿಯ ಅರಿವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆಯೆಂದರಿತು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಿದರು ಎಂದು ಶ್ರೀಗಳು ಶ್ಲ್ಯಾಘಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಉಪದೇಶಾ ಮೃತ ನೀಡಿದ ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾ ಚಾರ್ಯ ಸ್ವಾಮಿಗಳು, ಶುದ್ಧವಾದ ಬುದ್ದಿ ಸಂಪತ್ತಿನ ಆಗರವೆಂದು ಭಾವಿಸಿದ ಚಂದ್ರಮೌಳೀಶ್ವರ ಶಿವಾ ಚಾರ್ಯ ಸ್ವಾಮಿಗಳು ಬೆಂಗಾಡಾದ ಹರಪನಹಳ್ಳಿ ಯಲ್ಲಿ ಶೈಕ್ಷಣಿಕ ವಲಯದಲ್ಲಿ ಅದ್ಭುತ ಸಾಧನೆಗೈ ದರು. ಹಣ ಮತ್ತು ಅಧಿಕಾರದ ಬಗೆಗೆ ಚಿಂತಿಸುವ ಮನುಷ್ಯ ತನ್ನ ದೇಶ ಧರ್ಮ ಸಂಸ್ಕೃತಿಯ ಬಗೆಗೂ ಹೆಚ್ಚಿನ ಅಭಿಮಾನ ಶ್ರದ್ಧೆ ಇರಬೇಕೆಂಬುದು ಅವರ ಆಶಯವಾಗಿತ್ತು ಎಂದರು. 

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಞಾನ ಕ್ರಿಯಾತ್ಮಕವಾದ ಧರ್ಮದ ಪರಿಪಾಲನೆಯಿಂದ ಶಾಂತಿ ನೆಲೆಸಲು ಸಾಧ್ಯ. ಧರ್ಮ ಮತ್ತು ಧರ್ಮಾಚರಣೆ ಮರೆತರೆ, ಜೀವನದಲ್ಲಿ ಅವನತಿ ನಿಶ್ಚಿತ. ಹಣ ಕಳೆದುಕೊಂಡು ಬದುಕಬಹುದು. ಆದರೆ ಗುಣ ಕಳೆದುಕೊಂಡು ಬಾಳಲಾಗದೆಂಬ ನಿಲುವನ್ನು ಚಂದ್ರಮೌಳೀಶ್ವರ ಶ್ರೀಗಳು ಹೊಂದಿದ್ದರು  ಎಂದರು.

ಕೂಡ್ಲಿಗಿ ಪ್ರಶಾಂತ ಸಾಗರ ಶಿವಾಚಾರ್ಯರು ಉಪಸ್ಥಿತರಿದ್ದರು. ಟಿ.ಎಂ.ಎ.ಇ. ಸಂಸ್ಥೆ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಡಾ. ಪಿ.ಕೆ.ಎಂ.ಪ್ರಶಾಂತ್, ಸಾಲಿ ಬಸವರಾಜ, ಪಿ.ವಿಜಯ್‍ಕುಮಾರ್, ಟಿ.ಎಂ. ಪ್ರತೀಕ್, ಹೆಚ್.ಎಂ.ಲಲಿತಮ್ಮ, ಬಣಕಾರ್ ನಾಗರತ್ನಮ್ಮ, ಹರಾಳ್ ಅಶೋಕ್, ಟಿ.ಎಂ.ವಿಶ್ವನಾಥ, ಟಿ.ಎಂ.ಶಿವಶಂಕರ್, ಕುಲಸಚಿವ ಕೆ.ಎಸ್, ರುದ್ರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ.ಕೆ.ಮಧು, ಹೆಚ್.ಎಂ.ಕೊಟ್ರಯ್ಯ, ಕೆ.ಕುಮಾರ್, ಪರಮೇಶ್ವರಗೌಡ್ರು, ಎಂ.ಚಂದ್ರಣ್ಣ, ಪೂಜಾರ ಬಸವರಾಜಪ್ಪ ಅವರುಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು.

ಸಿ.ಎಂ.ಕೊಟ್ರಯ್ಯ ಸ್ವಾಗತಿಸಿದರು. ಎಸ್.ದ್ವಾರಕೀಶ ರೆಡ್ಡಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೆಳಿಗ್ಗೆ ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳಿಂದ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರಗಳು ಜರುಗಿದವು.  

error: Content is protected !!