ವೈಚಾರಿಕ ಕ್ರಾಂತಿಗೆ ಬಸವಣ್ಣನವರ ಕೊಡುಗೆ ಅಪಾರ

ವೈಚಾರಿಕ ಕ್ರಾಂತಿಗೆ ಬಸವಣ್ಣನವರ ಕೊಡುಗೆ ಅಪಾರ

ಹರಪನಹಳ್ಳಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ 

ಹರಪನಹಳ್ಳಿ.ಡಿ.13- ನಾಗರಿಕತೆ ಬೆಳೆದಂತೆ ವೈಚಾರಿಕತೆಯು ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಬಸವಣ್ಣನವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು   ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ  ಕೆ.ಉಚ್ಚೆಂಗೆಪ್ಪ ಹೇಳಿದರು.

ತಾಲ್ಲೂಕಿನ ಚಿಗಟೇರಿಯ ಶ್ರೀ ನಾರದಮುನಿ ಪ್ರೌಢಶಾಲೆಯಲ್ಲಿ ದಿ.ಮುದೇನೂರು ವಿರೂಪಾಕ್ಷಪ್ಪ ದತ್ತಿ.  ಶ್ರೀಮತಿ ಎಂ.ಪಿ.ಎಂ.ಶಾಂತಮ್ಮ ಬಸವನಗೌಡ್ರು ದತ್ತಿ,  ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ದತ್ತಿ ಮತ್ತು ಶ್ರೀಮತಿ ನಿಂಗಮ್ಮ ಗಿರಿಗೌಡ ನಾಗನಗೌಡ ದತ್ತಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕ ವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ.   87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೇ ತಿಂಗಳು 20ರಿಂದ 3 ದಿನಗಳ ಕಾಲ ಜರುಗುತ್ತಿದ್ದು ತಾವೆಲ್ಲರೂ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಹರಪನಹಳ್ಳಿಯ ವೀ.ವಿ.ಎಸ್ ಪ್ರೌಢಶಾಲೆಯ ಶಿಕ್ಷಕರಾದ ಮಂಜುಳ ಮೈಸೂರು ಅವರು `ಜನಪದ ಸಾಹಿತ್ಯ ಹಾಗೂ ವಚನ ಸಾಹಿತ್ಯ’ ಕುರಿತು ಮಾತನಾಡಿ, ಜನಪದ ಮಾನವನಿಗೆ ಸಂಸ್ಕಾರ ಕಲಿಸುವುದರ ಜತೆಗೆ ಮಾನವೀಯ ಮೌಲ್ಯ ಬಿತ್ತುವಂತಹ ಕಾರ್ಯ ಮಾಡುತ್ತದೆ. ಜನಪದವನ್ನು ರಚಿಸಿದವರೇನು ಯಾವುದೇ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದವರಲ್ಲ, ನಮ್ಮ ಹಿರಿಯರು ಅನುಭವದ ಮುಖಾಂತರ ಹೇಳಿದ್ದೇ ಜನಪದ ಎಂದರು.

ಶರಣರು ತಮ್ಮ ವಚನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದು, ವಚನಗಳ ತಾತ್ಪರ್ಯ ತಿಳಿದುಕೊಂಡು ಉತ್ತಮ ಜೀವನ ಸಾಗಿಸಿದಾಗ ನೆಮ್ಮದಿ ಯಾಗಿ ಇರಲು ಸಾಧ್ಯ, ಶಿವ ಶರಣರ ವಚನಗಳು ದೇವರಿಗೆ ಸೀಮಿತವಾಗದೇ, ಎಲ್ಲ ಜಾತಿ, ಜನಾಂಗದವರಿಗೂ ಕೂಡ  ಆದರ್ಶವಾಗಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಚಿಗಟೇರಿ ಹೊಬಳಿ ಘಟಕದ ಅಧ್ಯಕ್ಷ ಸಿ.ರಾಮನಗೌಡ, ತಾಲ್ಲೂಕು ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಎಂ. ನಾಗರಾಜ್‌ ಮಾತನಾಡಿ, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ವಚನ ಸಾಹಿತ್ಯವೂ ಒಂದಾಗಿದ್ದು, ಸಾಹಿತ್ಯ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೆ ಬೇಕಾದುದಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಪದ್ಮರಾಜ ಜೈನ್ ಮಾತನಾಡಿ, ವಿದ್ಯಾರ್ಥಿ ಗಳು  ನಾಡು-ನುಡಿ, ನೆಲ-ಜಲ  ಉಳಿಸುವ ಕೆಲಸ ಮಾಡ ಬೇಕು ಅದಲ್ಲದೇ ಮುಂದಿನ ವರ್ಷದಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ 10 ಸಾವಿರ ರೂ. ದತ್ತಿ ಇಟ್ಟು, ಅದರಲ್ಲಿ ಬರುವ ಬಡ್ಡಿ ಹಣದಿಂದ ಸನ್ಮಾನಿಸಿ, ಗೌರವಿಸಲಾಗುವುದು ಎಂದರು.

ಚಿಗಟೇರಿಯ ಶ್ರೀ ನಾರದಮುನಿ ವಿದ್ಯಾ ವರ್ಧಕ ಸಂಘದ  ಕಾರ್ಯದರ್ಶಿ ಎಂ.ನಿತ್ಯಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಚಂದ್ರಪ್ಪ ಹಲಗೇರಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನಾರದಮುನಿ ವಿದ್ಯಾ ವರ್ಧಕ ಸಂಘದ ಸದಸ್ಯರಾದ ಕೆಂಚನಗೌಡ, ಗೌರವ ಕೋಶಾಧಿಕಾರಿ ಜಿ.ಮಹಾದೇವಪ್ಪ, ನಾರದಮುನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ  ಟಿ.ಓ ಓಬಳೇಶ, ದೈಹಿಕ ಶಿಕ್ಷಕ ಜನಾರ್ದನ ರೆಡ್ಡಿ, ಶಿಕ್ಷಕರಾದ ದಯಾನಂದ ಎಂ.ಎನ್, ಕೆ.ಸಿ.ಶುಭಾ, ಲತಾ ಕೆ.ಟಿ, ಮಮತ ಕಮ್ಮಾರ್, ಇನಾಯತ್‌ವುಲ್ಲಾ, ಎಸ್.ಕೆ. ದರ್ಶನ್‌ ಮುಖಂಡರಾದ ಕರಿಂಸಾಹೇಬ್ ಸೇರಿದಂತೆ ಇತರರು ಇದ್ದರು.

error: Content is protected !!