ಮೆಕ್ಕೆಜೋಳ ಸಂಶೋಧನಾ ಘಟಕ‌ ಸ್ಥಾಪನೆಗೆ ಸಂಸದೆ ಡಾ.ಪ್ರಭಾ ಮನವಿ

ಮೆಕ್ಕೆಜೋಳ ಸಂಶೋಧನಾ ಘಟಕ‌ ಸ್ಥಾಪನೆಗೆ ಸಂಸದೆ ಡಾ.ಪ್ರಭಾ ಮನವಿ

ನವದೆಹಲಿ, ಡಿ. 12 – ರಾಜ್ಯದಲ್ಲೇ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಘಟಕ ಸ್ಥಾಪನೆ ಮಾಡಲು ಸದನದಲ್ಲಿ ಕೃಷಿ ಮತ್ತು ಕಿಸಾನ್ ಕಲ್ಯಾಣ ರಾಜ್ಯ ಖಾತೆ ಮಂತ್ರಿಯಾಗಿರುವ ಭಾಗೀರಥ್ ಚೌಧರಿ ಅವರಿಗೆ  ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು.

ಮೆಕ್ಕೆಜೋಳವನ್ನು ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ  ಬೆಳೆಯಲಾಗುತ್ತಿದ್ದು, ದಾವಣಗೆರೆ ಜಿಲ್ಲೆಯು ಮೆಕ್ಕೆಜೋಳ ಸಂಶೋಧನಾ ಘಟಕ ಸ್ಥಾಪನೆಗೆ ಮೂಲ ಸೌಲಭ್ಯವನ್ನು ಹೊಂದಿದ್ದು, ಪ್ರಾದೇಶಿಕ ಸಂಶೋಧನಾ ಘಟಕವನ್ನು ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿಸಲು ಅವಕಾಶ ಕಲ್ಪಿಸುವಂತೆ ಪ್ರಶ್ನೆಯ ಮೂಲಕ ಕೋರಿದರು. 

ರಾಜ್ಯದಲ್ಲಿ 1.3 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ 26.4 ಲಕ್ಷ ಟನ್‌ಗಳಷ್ಟು ಮೆಕ್ಕೆಜೋಳ ಉತ್ಪಾದನೆ ಆಗುತ್ತಿದ್ದು ( ಶಿವಮೊಗ್ಗ -0.58 ಲಕ್ಷ ಹೆಕ್ಟೇರ್, ಚಿತ್ರದುರ್ಗ- 0.67 ಲಕ್ಷ ಹೆಕ್ಟೇರ್ ಹಾಗೂ
ದಾವಣಗೆರೆಯಲ್ಲಿ 1.74 ಲಕ್ಷ ಹೆಕ್ಟೇರ್) ಮೆಕ್ಕೆಜೋಳ ಬೆಳೆಯು ಸರಾಸರಿ ಇದ್ದು ರಾಜ್ಯದಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ದಾವಣಗೆರೆಯಾಗಿದೆ ಎಂದರು. 

ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಶೋಧನಾ ಘಟಕವನ್ನು ಸ್ಥಾಪನೆ ಮಾಡುವುದರಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯ ನಗರ, ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಆಗಲಿದೆ ಎಂಬ ಮಾಹಿತಿಯೊಂದಿಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.

error: Content is protected !!