ಎಸ್.ಎಂ. ಕೃಷ್ಣ ಹಸ್ತಾಕ್ಷರವಿರುವ ಹೆಚ್‌ಬಿಎಂ ಕ್ಲಿಕ್ಕಿಸಿದ ಚಿತ್ರ
ಹಿರಿಯ ಪತ್ರಕರ್ತ ಪತ್ರಿಕಾ ಛಾಯಾಗ್ರಾಹಕ ಡಾ. ಎಚ್.ಬಿ. ಮಂಜುನಾಥ್ ತೆಗೆದ ತಮ್ಮ ಫೋಟೋ ಮೆಚ್ಚಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರು ಹಸ್ತಾಕ್ಷರ ನೀಡಿರುವುದು (8-4-2003)
ಎರಡು ದಶಕಗಳ ಹಿಂದೆ ಬಹುಷಃ 2003 ರಲ್ಲಿ ಇರಬೇಕು, ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರವರು ದಾವಣಗೆರೆಯ ಕಾರ್ಯಕ್ರಮಗಳಿಗೆ ಬಂದಾಗ ನಾನೇ ಫೋಟೋಗಳನ್ನು ತೆಗೆಯುತ್ತಿದ್ದೆ.
ನಡುವೆ ಶಾಮನೂರು ಶಿವಶಂಕರಪ್ಪನವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ಎಸ್.ಎಂ. ಕೃಷ್ಣರವರು ಸ್ವಲ್ಪ ಹೊತ್ತು ಶಿವಶಂಕರಪ್ಪನವರೊಡನೆ ಆತ್ಮೀಯವಾಗಿ ಮಾತನಾಡುತ್ತಾ ಕುಳಿತಿದ್ದರು. ಅಲ್ಲೂ ನಾನು ಫೋಟೋ ತೆಗೆಯುತ್ತಿದ್ದೆ.
ಆಗ ಎಸ್ ಎಂ ಕೃಷ್ಣ, ಶಿವಶಂಕರಪ್ಪ ಹಾಗೂ ನಾನು ಮೂವರೇ ಅಲ್ಲಿದ್ದದ್ದು. ನನ್ನ ಕಡೆ ನೋಡಿದ ಕೃಷ್ಣರವರು “ನೀವು ವ್ಯಂಗ್ಯ ಚಿತ್ರಕಾರರಲ್ಲವೇ? ಪತ್ರಿಕೆಗಳಲ್ಲೂ ನೋಡಿದ್ದೇನೆ ನಿಮ್ಮ ಪ್ರದರ್ಶನಕ್ಕೂ ಬಂದಿದ್ದೇನೆ, ನೀವು ಫೋಟೋಗ್ರಫಿಯನ್ನೂ ಮಾಡುತ್ತೀರಾ?” ಎಂದು ಕೇಳಿದರು. ನಾನು “ಹೌದು” ಎಂದು ಹೇಳುವಷ್ಟರಲ್ಲಿಯೇ ಶಿವಶಂಕರಪ್ಪನವರು “ಫೋಟೋಗ್ರಫಿನೇ ಇವನ ಪ್ರೊಫೆಷನ್ನು, ನಮ್ಮವೆಲ್ಲ ಇವನೇ ತೆಗೆಯೋದು, ಸೈಕಲ್ ಹೊಡೆದು ರೊಕ್ಕ ಉಳಿಸಿ ಮಹಾರಾಷ್ಟ್ರದಾಗೆ ಇಟ್ಟ, ಎಲ್ಲಾ ಹೋದ್ವು” ಎಂದರು. ತಕ್ಷಣ ಕೃಷ್ಣರವರು “ಇವರು ಕರ್ನಾಟಕದವರಲ್ವಾ ಮಹಾರಾಷ್ಟ್ರದಲ್ಲಿ ಯಾಕೆ ಇಟ್ಟಿದ್ದು!!” ಎಂದು ಆಶ್ಚರ್ಯದಿಂದ ಕೇಳಿದರು. ಶಿವಶಂಕರಪ್ಪನವರು ನಗುತ್ತಾ “ಅಲ್ರೀ, ಮಹಾರಾಷ್ಟ್ರ ರಾಜ್ಯ ಅಲ್ಲ, ಅದೇ ಮಣಿಪಾಲದ್ದು” ಎಂದು ನನ್ನ ಕಡೆ ತಿರುಗಿ “ಅದ್ಯಾವುದು ನೀನೇ ಹೇಳು” ಎಂದರು. ನಾನು “ಮಹಾರಾಷ್ಟ್ರ ಅಪೆಕ್ಸ್ ಅಂತ ಮಣಿಪಾಲದ್ದು ಹಣಕಾಸು ಸಂಸ್ಥೆ” ಎಂದೆ. “ಓಹೋ, ಅದಾ, ತುಂಬಾ ಹೋಯ್ತಾ?” ಎಂದರು ಕೃಷ್ಣ. “ತುಂಬಾ ಏನು, ದುಡಿದಿದ್ದಷ್ಟೂ ಇಟ್ಟಿದ್ದ ಅಂತ ಕಾಣುಸ್ತೇತಿ, ಹೇಳ್ಕೊಳ್ಳಲ್ಲ ಇವನು” ಎಂದರು ಶಿವಶಂಕರಪ್ಪನವರು.