ಹರಪನಹಳ್ಳಿ, ಡಿ.12- ನಾಡಿಗೆ ಶಿಕ್ಷಣ, ದಾಸೋಹ ನೀಡುವಲ್ಲಿ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಉಜ್ಜಯಿನಿ ಶ್ರೀ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಪಟ್ಟಣದ ತೆಗ್ಗಿನಮಠದ ಆವರಣದಲ್ಲಿ ನಡೆದ ಲಿಂ.ಡಾ.ಚಂದ್ರಮೌಳೀಶ್ವರ ಶ್ರೀಗಳ 10ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀ ವರಸದ್ಯೋ ಜಾತ ಶಿವಾಚಾರ್ಯ ಸ್ವಾಮಿಗಳ ಪಟ್ಟಾಧಿಕಾರದ 9ನೇ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಪರಿಪೂರ್ಣ ವಿದ್ಯೆ ಪಡೆದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಚಂದ್ರಮೌಳೀಶ್ವರ ಶಿವಾಚಾರ್ಯರು ಹರಪನಹಳ್ಳಿಯನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು ಎಂದರು.
ಚಂದ್ರಮೌಳೀಶ್ವರ ಶಿವಾಚಾರ್ಯರು ಕೇವಲ ಲೌಕಿಕ ಶಿಕ್ಷಣ ನೀಡುವುದಲ್ಲದೆ ಶಿವಪೂಜೆಯಲ್ಲಿ ನಿರಂತರವಾಗಿ ತಲ್ಲೀನರಾಗುವ ಮೂಲಕ ಸಂಸ್ಕಾರ ವನ್ನು ಯಾವತ್ತೂ ಮರೆತಿರಲಿಲ್ಲ ಎಂದು ನುಡಿದ ಅವರು, ಪ್ರಸ್ತುತ ಶ್ರೀಗಳು ಸಹ ಮಠದ ಎಲ್ಲಾ ಸಮಾಜ ಮುಖಿ ಕಾರ್ಯಗಳನ್ನು ಮುಂದು ವರೆಸುತ್ತಿರುವುದು ಶ್ಲ್ಯಾಘನೀಯ ಎಂದರು.
ತೆಗ್ಗಿನ ಮಠದ ಪೀಠಾಧ್ಯಕ್ಷರಾದ ವರಸದ್ಯೋ ಜಾತ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಸ್ವಾರ್ಥ ಇಲ್ಲದೆ ನಿಸ್ವಾರ್ಥ ಬದುಕು ನಡೆಸುವ ಮೂಲಕ ಸಮಾಜದ ದಾರಿದ್ರ್ಯವನ್ನು ಹೊಡೆದೋಡಿಸಿ ನಾಡಿನಾದ್ಯಂತ 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಲಿಂ. ಡಾ. ಚಂದ್ರಮೌಳೀಶ್ವರ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಟಿ.ಎಂ.ಚಂದ್ರಶೇಖರಯ್ಯ ಪ್ರಾಸ್ತಾವಿ ಕವಾಗಿ ಮಾತನಾಡಿ, ಲಿಂ. ಡಾ.ಚಂದ್ರಮೌಳೀಶ್ವರ ಶ್ರೀಗಳು ಮಠದ ಅಭಿವೃದ್ಧಿಯ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಗ್ರಾಮಾಂತರ ಪ್ರದೇಶದ ಏಳಿಗೆಗೆ ಮತ್ತು ಯುವ ಜನಾಂಗದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರ ಎಂದು ನಂಬಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದ ಮಕ್ಕಳಿಗೆ ಶಿಕ್ಷಣ ನೀಡಿದರು ಎಂದರು.
ದಾವಣಗೆರೆ ತಪೋವನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಮೆಹರ್ವಾಡಿ ಮಾತನಾಡಿ, ಈ ಭಾಗದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಶ್ರೀಮಠವು ಮಠದ ಅಭಿವೃದ್ಧಿ ಜೊತೆಗೆ ಬಡವರ ಕಷ್ಟ, ಸುಖಕ್ಕೆ ಸ್ಪಂದಿಸುತ್ತಾ ಬಂದಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ಇಂದು ವೀರಶೈವ ಜನಾಂಗದ ಕಟ್ಟು ಪಾಡುಗಳನ್ನು ನಮ್ಮ ಸಮುದಾಯದ ಯುವಕರು ಮರೆತು ಹೋಗುತ್ತಿದ್ದಾರೆ. ತೆಗ್ಗಿನಮಠದ ಶ್ರೀಗಳು ಅರಿವು ಮೂಡಿಸುವ ಮೂಲಕ ಅವುಗಳನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶ್ರೀಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶ್ರೀಗಳು ಉಪದೇಶಾಮೃತ ಮಂಡಿಸಿದರು.
ಹಿರಿಯ ನ್ಯಾಯವಾದಿ ಸಿ. ರಾಮಭಟ್, ಡಾ.ಮಹೇಶ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಫಾತೀಮಾಬಿ ಷಾವಲಿ, ಟಿಎಂಎಇ ಸಂಸ್ಥೆಯ ಉಪಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ಡಾ.ಎಸ್.ಎನ್.ಮಹೇಶ, ಜ್ಯೋತಿಷ್ಯ ತಜ್ಞ ಸಿ.ಎಂ.ರಾಜೇಂದ್ರಯ್ಯ, ಹೊಸಪೇಟೆಯ ಉದ್ಯಮಿ ಎಂ.ಆರ್. ಶೆಟ್ಟಿ, ರಾಣೇಬೆನ್ನೂರಿನ ಎ.ಕೆ. ಮೆಹರ್ವಾಡೆ, ಟಿಎಂಎಇ ಮಹಾವಿದ್ಯಾಲಯದ ಡೀನ್ ಟಿ.ಎಂ. ರಾಜಶೇಖರ್, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಂ.ಕೊಟ್ರಯ್ಯ, ಟಿ.ಎಂ.ವಿಶ್ವನಾಥ, ಶಿವಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.