ಹೊನ್ನಾಳಿ : ಲಾಟಿ ಚಾರ್ಜ್ ಖಂಡಿಸಿ ಇಂದು ಪ್ರತಿಭಟನೆ

ಹೊನ್ನಾಳಿ : ಲಾಟಿ ಚಾರ್ಜ್ ಖಂಡಿಸಿ ಇಂದು ಪ್ರತಿಭಟನೆ

ಹೊನ್ನಾಳಿ, ಡಿ.11- 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಮಂಗಳವಾರ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಮೇಲೆ ಪೊಲೀಸರು ಲಾಟಿ ಚಾರ್ಜ್ ಮಾಡುವ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ರಾಜ್ಯ ವೀರ ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣ ಶೆಟ್ಟಿ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಕರೆದಿದ್ದ ಬೆಳಗಾವಿ ಘಟನೆಯ ಖಂಡನಾ ನಿರ್ಣಯದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಘಟನೆಗೆ ಕಾರಣರಾದ ಅಧಿಕಾರಿಗಳನ್ನ ಅಮಾನತ್ತು ಮಾಡುವ ಮೂಲಕ ಹಲ್ಲೆಗೊಳಗಾದ ಬಂಧುಗಳಿಗೆ ಹಾಗು ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕಿದೆ ಎಂದರು. ಘಟನೆಯನ್ನ ಖಂಡಿಸಿ ಡಿ.12 ರ ಗುರುವಾರ ಬೆಳಗ್ಗೆ 11 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ, ಮಹಿಳಾ ಘಟಕ, ಯುವ ಹಾಗೂ ನಗರ ಘಟಕಗಳಿಂದ ಶಾಂತಿಯುತ ಮೆರವಣಿಗೆ ನಡೆಸಲಾಗುವುದು ಎಂದರು.

ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಪ್ಪ, ಯುವ ಘ. ಅಧ್ಯಕ್ಷ ಸಾಯಿ ಹಾಲೇಶ್, ನಗರ ಘ.ಅಧ್ಯಕ್ಷ ಹೋಟೆಲ್ ಗಿರೀಶ್, ಉಪಾಧ್ಯಕ್ಷ ಪ್ರಶಾಂತ , ರೇಣುಕಪ್ಪ ಉಪಸ್ಥಿತರಿದ್ದರು.

error: Content is protected !!