ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು
ಹೊನ್ನಾಳಿ, ಡಿ.11- ಪ್ರಸಕ್ತ ದಿನಮಾನಗಳಲ್ಲಿ ಜನ-ಸಾಮಾನ್ಯರು ವಚನ ಸಾಹಿತ್ಯದಿಂದ ದೂರ ಉಳಿಯುತ್ತಿದ್ದಾರೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ನ ಮಹಾಪೋಷಕ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಜನಸಾಮಾನ್ಯರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯದ ಬಗೆಗೆ ಅರಿವು ಮೂಡಿಸುವ ಕಾರ್ಯದ ಜರೂರಿದೆ ಎಂದರು.
ಶರಣ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಎಂ.ಆರ್ ಲೋಕೇಶ್ ಮಾತನಾಡಿ, ಶರಣ ಕುಲಕ್ಕೆ ದಕ್ಕೆ ಬರದಂತೆ ವಚನ ಸಾಹಿತ್ಯದ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ವಚನ ಸಾಹಿತ್ಯವನ್ನು ಪ್ರಸ್ತುತ ಹಾಗೂ ಭವಿಷ್ಯಕ್ಕಾಗಿ ಉಳಿಸುವ ಹೊಣೆಗಾರಿಕೆ ಶರಣ ಸಾಹಿತ್ಯ ಪರಿಷತ್ತಿನ ಮೇಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ ಧನಂಜಯ ಮಾತನಾಡಿ, ಜನ ಸಾಮಾನ್ಯರಲ್ಲಿ ಕಾಯಕ, ಅನ್ನ, ಅರಿವು ಹಾಗೂ ಅಕ್ಷರಗಳ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಶರಣರು ಮಾಡಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ `ಕಲಾಶ್ರೀ ಜಯಪ್ಪ’ ರಚಿಸಿದ `ಗ್ರಾಮೀಣ ಪ್ರತಿಭೆ ಸಾಧಕ ಜೀವಿ ಎಂ.ಎಸ್ ರೇವಣಪ್ಪ’ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಬಿ ಪರಮೇಶ್ವರಪ್ಪ, ಕದಳಿ ಮಹಿಳಾ ಜಿಲ್ಲಾಧ್ಯಕ್ಷೆ ಗಾಯತ್ರಿ ವಸ್ತ್ರದ್, ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಡಾ. ಪ್ರತಿಮಾ ನಿಜಗುಣ ಶಿವಯೋಗಿ, ಕೆ.ಪಿ. ದೇವೇಂದ್ರಯ್ಯ, ಡಾ. ವಿಜಯಕುಮಾರ, ಮುರುಗೆಪ್ಪಗೌಡ್ರು, ಸಾಹಿತಿಗಳಾದ ಸಂಗನಾಳಮಠ, ಪಿ.ಎಂ ಸಿದ್ದಯ್ಯ, ಎಂ.ಎಸ್ ರೇವಣಪ್ಪ, ಎಂ. ನಾಗರಾಜನಾಯ್ಕ ಇತರರು ಇದ್ದರು.