ಹಾಲಿವಾಣದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಲೇಬೆನ್ನೂರು, ಡಿ. 11- ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ವಾಸ್ಥ್ಯ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದುವ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಆಧ್ಯಾತ್ಮಕ ಪ್ರವಚನಕಾರ ಸಿರಿಗೆರೆ ಸಿದ್ದೇಶ್ ಹೇಳಿದರು.
ಅವರು ಸೋಮವಾರ ಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಧರ್ಮಸ್ಥಳ ಗ್ರಾಮಾಭಿೃವದ್ಧಿ ಯೋಜನೆ ಎಂದರೆ ಬರೀ ಮಹಿಳೆಯರಿಗೆ ಸಾಲ ಕೊಡುವುದಲ್ಲ. ಧರ್ಮಸ್ಥಳ ಯೋಜನೆ ಎಲ್ಲಾ ವರ್ಗಗಳ ಜನರಿಗೆ ಉಪಯುಕ್ತ ಸೇವೆ ಒದಗಿಸುವ ಸರ್ಕಾರವಾಗಿದ್ದು, ವಿಶೇಷವಾಗಿ ಗ್ರಾಮೀಣ ಜನರ ಬದುಕಿಗೆ ಭರವಸೆಯ ಬೆಳಕು ಮೂಡಿಸಿದೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರತಿ ವರ್ಷ 20ರಿಂದ 50 ಸಾವಿರ ರೂ.ಗಳವರೆಗೆ ವಿದ್ಯಾರ್ಥಿ ವೇತನ ನೀಡುವ ಡಾ. ವೀರೇಂದ್ರ ಹೆಗ್ಗಡೆ ಅವರು ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಪ್ರೌಢಶಾಲಾ ಹಂತದಲ್ಲೇ ಮಾಡುತ್ತಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ಆಗುತ್ತಿರುವ ತೊಂದರೆಗಳನ್ನು ತಿಳಿಸುವ ಜೊತೆಗೆ ಅವರ ಮೂಲಕ ಪೋಷಕರನ್ನೂ ದುಶ್ಚಟಗಳಿಂದ ಮುಕ್ತಿಗೊಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದ ಸಿದ್ದೇಶ್ ಅವರು, ಡಾ. ಅಂಬೇಡ್ಕರ್ ಅವರು ಹೇಳಿದಂತೆ ವಿದ್ಯೆಯಿಂದ ಮಾತ್ರ ಪರಿವರ್ತನೆ ಸಾಧ್ಯ. ಜೊತೆಗೆ ವಿದ್ಯೆ ಸ್ಪರ್ಧಾತ್ಮಕ ಜಗತ್ತು ಕೂಡಾ ಆಗಿದ್ದು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮತ್ತು ಆಸಕ್ತಿಯಿಂದ ಪಾಠ, ಪ್ರವಚನ ಕೇಳಿ ಪ್ರಗತಿ ಸಾಧಿಸಬೇಕೆಂದರು.
ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂದ ದೇವಾಡಿಗ ಮಾತ ನಾಡಿ, ಬಲಿಷ್ಠ ದೇಶಕ್ಕೆ ಸ್ವಾಸ್ಥ್ಯ ಸಮಾಜದ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಎಂದೂ ದುಶ್ಚಟಗಳತ್ತ ಮುಖ ಮಾಡದೇ ಶಿಕ್ಷಣ, ಸಂಸ್ಕಾರ ಸೇವೆ ಕಡೆಗೆ ಗಮನ ಹರಿಸಬೇಕೆಂಬುದು ಡಾ. ಹೆಗ್ಗಡೆ ಅವರ ಆಶಯವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್, ಯೋಜನೆಯ ವಲಯ ಮೇಲ್ವಿಚಾರಕಿ ರಕ್ಷಿತಾ, ಶಾಲಾ ಮುಖ್ಯ ಶಿಕ್ಷಕಿ ಪರಿಮಳ, ಶಿಕ್ಷಕಿ ಮರುಳಸಿದ್ದಮ್ಮ, ಶಿಕ್ಷಕ ಮಾಲತೇಶ್ ಮಾತನಾಡಿದರು.
ಶಿಕ್ಷಕಿಯರಾದ ಸರಿತಾ, ವೀಣಾ, ರೂಪಾ, ಎಸ್‌ಡಿಎಂಸಿ ಅಧ್ಯಕ್ಷ ಶಿವಕ್ಳ ಆಂಜನೇಯ, ಸೇವಾ ಪ್ರತಿನಿಧಿಗಳಾದ ಚಂದ್ರಕಲಾ, ಶೃತಿ, ವಿಎಲ್‌ವಿ ಜ್ಯೋತಿ ಹಾಜರಿದ್ದರು.