ಮಲೇಬೆನ್ನೂರು, ಡಿ. 10- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ 39 ಭಜನಾ ತಂಡಗಳು ಭಾಗವಹಿಸಿದ್ದವು.
27 ಪುರುಷ ತಂಡಗಳು ಮತ್ತು 12ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿ, ಜನರ ಗಮನ ಸೆಳೆದವು.
ಬೆಳಿಗ್ಗೆ 10 ಗಂಟೆಗೆ ಈ ಭಜನಾ ಸ್ಪರ್ಧೆಗೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದ್ದರು.
ದಿನವಿಡೀ ನಡೆದ ಸ್ಪರ್ಧೆಯಲ್ಲಿ ಅಂತಿಮವಾಗಿ ಪುರುಷರ ತಂಡದಲ್ಲಿ ರಾಮದುರ್ಗ ತಾಲ್ಲೂಕಿನ ಹೊಸೂರಿನ ಶಬರಿ ದೇವಿ ಭಜನಾ ಮಂಡಳಿ ಪ್ರಥಮ ಸ್ಥಾನ ಮತ್ತು ಮಹಿಳೆಯರ ತಂಡದಲ್ಲಿ ಭದ್ರಾವತಿ ತಾಲ್ಲೂಕಿನ ಶ್ರೀನಿವಾಸಪುರದ ಶ್ರೀ ರಾಮ ಭಜನಾ ಸಂಘವು ಪ್ರಥಮ ಸ್ಥಾನ ಪಡೆದವು.
ಪುರುಷರ ತಂಡದಲ್ಲಿ ನರಗುಂದ ತಾಲ್ಲೂಕಿನ ಕೊಣ್ಣೂರು ಶ್ರೀ ಬಾಯಮ್ಮದೇವಿ ಭಜನಾ ಸಂಘವು ದ್ವಿತೀಯ ಸ್ಥಾನ ಮತ್ತು ಮಹಿಳೆಯರ ತಂಡದಲ್ಲಿ ಶಿಕಾರಿಪುರ ತಾ. ಗ್ರಾಮ ಶ್ರೀ ಪ್ರಗತಿ ಯುವತಿ ಭಜನಾ ಮಂಡಳಿಗೆ ದ್ವಿತೀಯ ಸ್ಥಾನ ಲಭಿಸಿತು.
ಪುರುಷರ ತಂಡದಲ್ಲಿ ಮುಂಡಗೋಡು ತಾ. ಜಿಗಳ್ಳಿಯ ಶ್ರೀ ವೀರೇಶ್ವರ ಭಜನಾ ಸಂಘವು ತೃತೀಯ ಸ್ಥಾನ ಪಡೆದರೆ ಮಹಿಳಾ ತಂಡದಲ್ಲಿ ಹೊಳಲ್ಕೆರೆ ತಾ. ಮಲ್ಲಾಡಿಹಳ್ಳಿಯ ಹರೇ ಶ್ರೀನಿವಾಸ ಭಜನಾ ಮಂಡಳಿಗೆ ತೃತೀಯ ಸ್ಥಾನ ಲಭಿಸಿತು.
ಪ್ರಥಮ ಸ್ಥಾನ ಪಡೆದ ತಂಡಗಳಿಗೆ ತಲಾ 25 ಸಾವಿರ ರೂ. ನಗದು ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ತಲಾ 15 ಸಾವಿರ ರೂ. ನಗದು ಬಹುಮಾನ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೆ ತಲಾ 10 ಸಾವಿರ ರೂ.ಗಳ ಬಹುಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಸೇರಿದಂತೆ ಟ್ರಸ್ಟ್ ಸದಸ್ಯರು, ಗ್ರಾ.ಪಂ. ಅಧ್ಯಕ್ಷ ಸದಸ್ಯರು ಮತ್ತು ಗ್ರಾಮದ ಮುಖಂಡರು ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡಿದ್ದರು.