ಮತದಾರರ ಪಟ್ಟಿಗೆ ಸೇರುವಂತೆ ಯುವ ಮತದಾರರಿಗೆ ಜಾಗೃತಿ

ಮತದಾರರ ಪಟ್ಟಿಗೆ ಸೇರುವಂತೆ ಯುವ ಮತದಾರರಿಗೆ ಜಾಗೃತಿ

ಮಲೇಬೆನ್ನೂರು, ಡಿ. 10- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಬೀರಲಿಂಗೇಶ್ವರ ಪದವ ಪೂರ್ವ ಕಾಲೇಜು ಹಾಗೂ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಗೆ ಯುವ ಮತದಾರರ ಸೇರ್ಪಡೆ ಕುರಿತು ಉಪತಹಶೀಲ್ದಾರ್ ಆರ್. ರವಿ ಅವರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಬೀರಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಾತನಾಡಿದ ರವಿ ಅವರು, 18 ವರ್ಷ ಮೇಲ್ಪಟ್ಟವರು ಕೂಡಲೇ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು.

ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್, ಹುಟ್ಟಿದ ದಿನಾಂಕಕ್ಕಾಗಿ ಶಾಲಾ ದಾಖಲಾತಿ ಮತ್ತು ಪೋಷಕರ ಗುರುತಿನ ಚೀಟಿಯೊಂದಿಗೆ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಅಥವಾ ನಾಡ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ನೀವು ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಶ್ರೇಷ್ಠ ನಾಯಕ ಅಥವಾ ನಾಯಕಿಯನ್ನು ಆಯ್ಕೆ ಮಾಡುವ ಹಕ್ಕು ನಿಮಗೆ ಸಿಗಲಿದೆ ಎಂದು ಆರ್. ರವಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಹಿಂಡಸಘಟ್ಟಿ ಹನುಮಗೌಡ ಮಾತನಾಡಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವ ಮತದಾರರ ಪಾತ್ರ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ 18 ವರ್ಷ ದಾಟಿದ ತಕ್ಷಣ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಿಸಿಕೊಳ್ಳುವ ಮೂಲಕ ದೇಶದ ಪೌರತ್ವ ಪಡೆಯಬೇಕೆಂದರು.

ಗ್ರಾಮ ಆಡಳಿತಾಧಿಕಾರಿಗಳಾದ ಅಣ್ಣಪ್ಪ, ಷರೀಫ್, ದೇವರಾಜ್, ಕಾಲೇಜಿನ ಉಪನ್ಯಾಸಕ ಶಂಭುಲಿಂಗಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್, ಗ್ರಾಮ ಸಹಾಯಕ ಮಾರುತಿ ಈ ವೇಳೆ ಹಾಜರಿದ್ದರು.

error: Content is protected !!