ಶಿಕ್ಷಣ ಅದಾಲತ್; `ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’

ಶಿಕ್ಷಣ ಅದಾಲತ್; `ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’

ನ್ಯಾಮತಿ ತಾ|| ನಿಂದ ಶಿಕ್ಷಣ ಅದಾಲತ್ ಆರಂಭ: ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಿನಯ್ ಕುಮಾರ್

ಹೊನ್ನಾಳಿ,ಡಿ. 9- ಸಾಮಾಜಿಕ ನ್ಯಾಯಕ್ಕಾಗಿ ಸಾರ್ವಜನಿಕ ಕೆಲಸ ಮುಂದುವರಿಸುವುದೇ ನನ್ನ ಆದ್ಯ ಕರ್ತವ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋತೆನೆಂದು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಸ್ವಾಭಿಮಾನ ಬಳಗದ ರಾಜ್ಯಾಧ್ಯಕ್ಷ ಬಿ.ಜಿ.ವಿನಯಕುಮಾರ್ ಹೇಳಿದರು.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಅಭಿಮಾನಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಯಿತು, ಶಾಮನೂರು ಶಿವಶಂಕರಪ್ಪ ಶಿವಮೊಗ್ಗ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಕರೆ ಕೊಟ್ಟರು, ಆದರೆ ಅವರ ಮೇಲೆ ಯಾವುದೇ ಕ್ರಮ ಮಾತ್ರ ಆಗಲಿಲ್ಲ. ಇದು ರಾಜಕೀಯ ಕ್ಷೇತ್ರದಲ್ಲಿ ನಡೆಯವಂತಹ ವೈರುದ್ಧ್ಯಗಳು ಎಂದು ಹೇಳಿದರು.

ಬಡವರ ಮತ್ತು ಶೋಷಿತ ವರ್ಗಕ್ಕೆ ರಾಜಕೀಯ ಪ್ರಜ್ಞೆ ಬೆಳೆಸುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಇದಕ್ಕಾಗಿ ಸ್ವಾಭಿಮಾನ ಬಳಗದ ವತಿಯಿಂದ ರಾಜ್ಯಾದ್ಯಂತ ಶಿಕ್ಷಣ ಅದಾಲತ್, ಕೃಷಿ ಅದಾಲತ್, ಜನತಾ ಅದಾಲತ್‍ಗಳನ್ನು ಹಮ್ಮಿಕೊಂಡು ತನ್ಮೂಲಕ ಮೂರು ಅಂಶಗಳ ವಿಚಾರಧಾರೆಯನ್ನು ತಲುಪಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ದಿನಾಂಕ 18 ರ ಬುಧವಾರದಿಂದ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಿಂದ ಶಿಕ್ಷಣ ಅದಾಲತ್ ಪ್ರಾರಂಭವಾಗಿ, ಹಳೇಜೋಗ, ಹೊಸಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳ, ಸೌಳಂಗ, ಸೋಗಿಲು, ಚಟ್ನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲಾಗುವುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಆತಂಕಕಾರಿಯಾಗಿದ್ದು, ಶಿಕ್ಷಣ ಅದಾಲತ್ ಕಾರ್ಯಕ್ರಮದಡಿ `ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆ’ ಎನ್ನುವ ಘೋಷಣೆಯೊಂದಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಮೂಲಭೂತ ಸೌಕರ್ಯಗಳು, ಶಾಲಾ ಕೊಠಡಿ, ಆಟದ ಮೈದಾನ, ಬಿಸಿಯೂಟ ಯೋಜನೆ, ಶೌಚಾಲಯ, ಭದ್ರತೆ, ಶಿಕ್ಷಣದ ಗುಣಮಟ್ಟದ ಬಗ್ಗೆ ಶಾಲಾ ಮುಖ್ಯಸ್ಥರು, ಸಹ ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸಲಾಗುವುದು. ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ಕೈಗೊಳ್ಳಬೇಕಾದ ಮಾರ್ಗಗಳು, ಸಲಹೆಗಳನ್ನು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವುದಾಗಿದೆ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುವಿರಿ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮುಂದೆ ಹೊನ್ನಾಳಿ, ಹರಪನಹಳ್ಳಿ ಕ್ಷೇತ್ರಗಳು ಇದ್ದು, ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದು, ಪಕ್ಷದ ಟಿಕೆಟ್ ಸಿಗದಿದ್ದರೆ ಹೊನ್ನಾಳಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅಭಿಲಾಷೆ ಇದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮುಖಂಡರಾದ ರಾಜು ಕಣಗಣ್ಣಾರ್, ಮಂಜುನಾಥ್, ದೇವರಾಜ್, ವಾಸಪ್ಪ, ವಿನಯ್ ಇದ್ದರು.

error: Content is protected !!