ಅಜ್ಜಯ್ಯನ ಪಾಲಿಕೋತ್ಸವ
ಮಲೇಬೆನ್ನೂರು, ಡಿ.9- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವವು ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು.
ಕಾರ್ತಿಕೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವ ಮತ್ತು ರಾತ್ರಿ ಅಜ್ಜಯ್ಯನ ಪಾಲಿಕೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದವು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳ್ಳಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ವೀರಗಾಸೆ, ಡೊಳ್ಳು, ಭಜನೆ, ಹಲಗೆ ಸೇರಿದಂತೆ ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.
ರಾತ್ರಿ ಅಜ್ಜಯ್ಯನ ಪಾಲಿಕೋತ್ಸವದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೂವಿನಿಂದ ಅಲಂಕಾರ ಮಾಡಿದ ಟ್ರ್ಯಾಕ್ಟರ್‌ನಲ್ಲಿ ಅಜ್ಜಯ್ಯನ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
ಪಟಾಕಿ ಸಿಡಿತ ಬಾನಂಗಳದಲ್ಲಿ ಬಣ್ಣ-ಬಣ್ಣದ ಚಿತ್ತಾರ ಮೂಡಿಸಿ, ಜನರ ಗಮನ ಸೆಳೆಯಿತು. ಗದ್ಗುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.