ರೈತರಲ್ಲಿ ಆತಂಕ ಸೃಷ್ಠಿಸಿದ ವಕ್ಪ್ ಬೋರ್ಡ್ ಆಸ್ತಿ ವಿವಾದ ಉಂಟಾದ ಪ್ರದೇಶದಲ್ಲಿ ಪ್ರವಾಸ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಈ ಆದೇಶ ವಾಪಾಸ್ ಪಡೆಯಲಾಗಿದೆ ಎಂದಿದ್ದಾರೆ. ಆದರೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ವಕ್ಫ್ ಬೋರ್ಡ್ ಹೆಸರು ತೆಗೆದು ರೈತರ ಜಮೀನು ಎಂದು ತೋರಿಸುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
– ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ದಾವಣಗೆರೆ, ಡಿ. 9- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇದೇ ದಿನಾಂಕ 13 ರಂದು ಬೆಳಿಗ್ಗೆ 10.30ಕ್ಕೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೇ ಮರೆತಿದ್ದಾರೆ. ರೈತಪರ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಆದ ಕಾರಣ ಈ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕೃಷಿ ಕಾಯ್ದೆ ರದ್ದುಗೊಳಿಸಲಿಲ್ಲ. ಇದರಿಂದಾಗಿ 10 ಲಕ್ಷ ರೈತರು ಕೃಷಿ ಭೂಮಿಯಿಂದ ಹೊರಗುಳಿದಿದ್ದಾರೆ. ವಕ್ಫ್ ಬೋರ್ಡ್ ರೈತರ ಪಹಣಿಯಲ್ಲಿ ತರಲಾಗಿದೆ. ವಕ್ಫ್ ಸಂಪೂರ್ಣ ರದ್ದಾಗಿಲ್ಲ. ಹಾವೇರಿಯಲ್ಲಿ ರೈತರ ಪಹಣಿ ತಿದ್ದಿ ವಕ್ಫ್ ಎಂದು ಮಾಡಿ ತಕ್ಷಣವೇ ಆ ಭೂಮಿ ಮೋಕಾಶಿ ಟ್ರಸ್ಟ್‌ಗೆ ವರ್ಗಾವಣೆ ಮಾಡಿ ಖುದ್ದು ಜಿಲ್ಲಾಧಿಕಾರಿ, ಎಸ್ಪಿ, ಎಸಿ ಸ್ಥಳಕ್ಕೆ ಬಂದು ಆ ರೈತರ ಭೂಮಿಯನ್ನು ಜೆಸಿಬಿ ಮೂಲಕ ಇದ್ದ ಬೆಳೆಯನ್ನು ನಾಶಗೊಳಿಸಿ ರೈತರನ್ನು ಭೂಮಿಯಿಂದ ಹೊರಹಾಕಿದ್ದಾರೆ.
ಕಳೆದ 75 ವರ್ಷಗಳಿಂದ ಸುಮಾರು 10 ಲಕ್ಷ ರೈತರು ಬಗರ್ ಹುಕ್ಕುಂ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಸಕ್ರಮಗೊಳಿಸಬೇಕು. ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಉಳುಮೆ ಮಾಡಿಕೊಂಡಿದ್ದ ರೈತರನ್ನು ಹೊರದೂಡುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ನಿಲ್ಲಬೇಕು. ಉಚ್ಛ ನ್ಯಾಯಾಲಯ ಮೂರು ಎಕರೆ ಹಂಗಾಮಿ ಮಾಡಿದ್ದರೆ ಹೊರ ಹಾಕಬಾರದು ಎಂದು ತಿಳಿಸಿದೆ. ಸರ್ಕಾರ ಆದೇಶ ಮಾಡಿದೆ. ಆದರೂ ಸಕ್ರಮ ಮಾಡಿಲ್ಲ ಎಂದು ದೂರಿದರು.
ಎಂಎಸ್‌ಪಿ ಶಾಸನಬದ್ಧಗೊಳಿಸಲು ಯಾವುದೇ ತೀರ್ಮಾನವಿಲ್ಲದೇ ಇರುವ ಇವರು, ಕೃಷಿ ಮಾರುಕಟ್ಟೆಯಲ್ಲಿ ವರ್ಷದ ಕೆಲಸದ ಎಲ್ಲಾ ದಿನಗಳಲ್ಲಿ ಖರೀದಿ ಕೇಂದ್ರ ತೆರೆದಿರಬೇಕು. 10 ಸಾವಿರ ಕೋಟಿ ಆವರ್ತ ನಿಧಿ ಸ್ಥಾಪಿಸಿ ಎಲ್ಲಾ ಬೆಳೆ ಖರೀದಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕಬ್ಬಿನ ಸಕ್ಕರೆ ಪ್ರಮಾಣವನ್ನು 9.5 ರಿಂದ 10.5 ಕ್ಕೆ ಹೆಚ್ಚುವರಿ ಮಾಡಿ 10 ಕೆಜಿ ಸಕ್ಕರೆ ವಂಚನೆ ಮಾಡಿದೆ. ಇದರಿಂದಾಗಿ ಕಾರ್ಖಾನೆಯವರಿಗೆ ಲಾಭ ಮಾಡಿದಂತಾಗಿದೆ. ಸಕ್ಕರೆ ಪರ್ಸೆಂಟೇಜ್ ನಿರ್ಧಾರ ಮಾಡುವುದು ಕಾರ್ಖಾನೆ ಮಾಲೀಕರು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಕಾರ್ಪೊರೇಟ್ ಕಂಪನಿಗಳನ್ನು ತೆರವು ಮಾಡಿಸುವು ದಿಲ್ಲ. ಆದರೆ ರೈತರಿಗೆ ಮಾತ್ರ ತೊಂದರೆ ಕೊಡು ತ್ತಿದ್ದು, ಇದು ಖಂಡನೀಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ನಸಮುದ್ರ ಶೇಖರ ನಾಯ್ಕ, ಭಕ್ತರಹಳ್ಳಿ ಭೈರೇಗೌಡ, ಶತಕೋಟಿ ಬಸಪ್ಪ, ವಿಶ್ವನಾಥ್, ನಲ್ಕುದುರೆ ಚನ್ನಬಸಪ್ಪ, ಎನ್. ಬಸವರಾಜ್ ದಾಗಿನಕಟ್ಟೆ ಉಪಸ್ಥಿತರಿದ್ದರು.